ADVERTISEMENT

ಐಎಸ್‌ಎಸ್‌ಗೆ ಭಾರತದ ಗಗನಯಾನಿ: ಅಮೆರಿಕ ಕಂಪನಿ ಆ್ಯಕ್ಸಿಯಮ್-ಇಸ್ರೊ ಒಪ್ಪಂದ

ಪಿಟಿಐ
Published 27 ಜುಲೈ 2024, 15:45 IST
Last Updated 27 ಜುಲೈ 2024, 15:45 IST
ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್   

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ನಾಲ್ವರ ಪೈಕಿ, ಒಬ್ಬ ಗಗನಯಾತ್ರಿ ನಾಸಾ ಸಹಯೋಗದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪಯಣಿಸಲಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾನ ಕೈಗೊಳ್ಳುವ ಈ ಜಂಟಿ ಯೋಜನೆಗಾಗಿ,  ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ, ಆ್ಯಕ್ಷಿಯಮ್ ಸ್ಪೇಸ್‌ ಎಂಬ ಖಾಸಗಿ ಕಂಪನಿಯನ್ನು ಆಯ್ಕೆ ಮಾಡಿದೆ. ಈ ಕಂಪನಿಯೊಂದಿಗೆ ಇಸ್ರೊ ಒಪ್ಪಂದ ಮಾಡಿಕೊಂಡಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ADVERTISEMENT

‘ಐಎಸ್‌ಎಸ್‌ಗೆ ಭಾರತೀಯ ಗಗನಯಾನಿಯನ್ನು ಕಳುಹಿಸುವ ಕುರಿತು ಕಳೆದ ವರ್ಷ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದರು. 2024ರಲ್ಲಿ ಭಾರತೀಯ ಗಗನಯಾನಿಯನ್ನು ಐಎಸ್ಎಸ್‌ಗೆ ಕಳುಹಿಸುವುದಾಗಿ ಅಧ್ಯಕ್ಷ ಜೋ ಬೈಡನ್‌ ಘೋಷಿಸಿದ್ದರು’ ಎಂದು ಸಚಿವ ಸಿಂಗ್‌ ತಿಳಿಸಿದ್ದಾರೆ.

ಗಗನಯಾನ: ಲೋಕಸಭೆಗೆ ನೀಡಿರುವ ಮಾಹಿತಿ

* ನಾಲ್ವರು ಪೈಲಟ್‌ಗಳಿಗೆ ರಷ್ಯಾದಲ್ಲಿ ಪ್ರಾಥಮಿಕ ಹಂತದ ತರಬೇತಿ ಪೂರ್ಣಗೊಂಡಿದ್ದು  ಪ್ರಸ್ತುತ ಬೆಂಗಳೂರಿನ ಎಟಿಎಫ್‌ನಲ್ಲಿ ತರಬೇತಿ ನೀಡಲಾಗುತ್ತಿದೆ

* ಗಗನಯಾನಕ್ಕೆ ಸಂಬಂಧಿಸಿದ ಪ್ರೊಪಲ್ಷನ್ ಸಿಸ್ಟಮ್‌ಗಳ ಎಲ್ಲ ಹಂತದ ಪರೀಕ್ಷೆಗಳು ಪೂರ್ಣಗೊಂಡಿವೆ

* ಗಗನಯಾನದ ರಾಕೆಟ್‌ ಬಾಹ್ಯಾಕಾಶಕ್ಕೆ ಯಾನ ಮಾಡುವ ಸಂದರ್ಭದಲ್ಲಿ ಅವಘಡಕ್ಕೆ ತುತ್ತಾದರೆ ಗಗನಯಾನಿಗಳು ಅಲ್ಲಿಂದ ಪಾರಾಗಲು ಅಗತ್ಯವಿರುವ ಐದು ವಿಧದ ‘ಕ್ರೂ ಎಸ್ಕೇಪ್‌ ಸಿಸ್ಟಮ್‌’ಗೆ ಬೇಕಾದ ಯಂತ್ರಗಳ ವಿನ್ಯಾಸ ಪರೀಕ್ಷೆ ಮುಕ್ತಾಯವಾಗಿದೆ

* ಅವಘಡ ಸಂದರ್ಭದಲ್ಲಿ ಗಗನಯಾನಿಗಳು ಪಾರಾಗುವ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ

* ಮಿಷನ್‌ ಕಂಟ್ರೋಲ್‌ ಸೆಂಟರ್‌ (ಎಂಸಿಸಿ) ಹಾಗೂ ‘ಗ್ರೌಂಡ್‌ ಸ್ಟೇಷನ್’ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.