ಗ್ಯಾಂಗ್ಟಾಕ್: ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟು, ಐವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭೂಕುಸಿತದಿಂದ ರಸ್ತೆಗಳು ಮತ್ತು ಹಲವು ಮನೆಗಳು ಹಾನಿಗೊಳಗಾಗಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಗನ್‌ನ ಪಕ್ಷೇಪ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ. ರಂಗ್ರಾಂಗ್ ಬಳಿಯ ಅಂಬಿತಾಂಗ್‌ನಲ್ಲಿ ಮೂವರು ಮತ್ತು ಪಕ್ಷೇಪ್‌ನಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪರಿಸ್ಥಿತಿ ಬಗ್ಗೆ ಚರ್ಷಿಸಲು ಮಂಗನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮ್ ಕುಮಾರ್ ಚೆಟ್ರಿ ಅವರು ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ತುರ್ತು ಸಭೆ ಕರೆದಿದ್ದಾರೆ.
ಪೇಮಾ ಖಂಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಅರುಣಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಜಿಲ್ಲಾಡಳಿತ, ಪೊಲೀಸರು ಮತ್ತು ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಅವರು ತ್ವರಿತ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಕಾರ್ಯ ನಡೆಯುತ್ತಿವೆ ಎಂದು ತಮಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂತ್ರಸ್ತರೊಂದಿಗೆ ರಾಜ್ಯ ಸರ್ಕಾರ ನಿಂತಿದೆ. ದುಃಖಿತ ಕುಟುಂಬಗಳಿಗೆ ಮತ್ತು ಭೂಕುಸಿತದಿಂದ ಹಾನಿಗೊಳಗಾದ ನಿರಾಶ್ರಿತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಅವರು ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.