ADVERTISEMENT

ಗುರುಗ್ರಾಮದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಕಾರ್ಮಿಕ ಸಾವು

ಪಿಟಿಐ
Published 19 ಜುಲೈ 2021, 1:54 IST
Last Updated 19 ಜುಲೈ 2021, 1:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಪ್ರಯತ್ನ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಗೆ 18ರಿಂದ 20 ತಾಸುಬೇಕಾಗಬಹುದು ಎಂದು ಜಿಲ್ಲಾಧಿಕಾರಿ ಯಶ್ ಗಾರ್ಗ್ ತಿಳಿಸಿದ್ದಾರೆ.

ಫಾರೂಕ್‌ನಗರದ ಪಟೌಡಿ ರಸ್ತೆಯಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ. ಇನ್ನೊಬ್ಬರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಟ್ಟಡದ ಅಡಿಯಲ್ಲಿ ಎಷ್ಟು ಮಂದಿ ಸಿಲುಕಿರಬಹುದು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಮಂದಿ ಸಿಲುಕಿದ್ದಾರೆ. ಕಲ್ಲುಮಣ್ಣುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕವಷ್ಟೇ ನಿಖರ ಸಂಖ್ಯೆ ಗೊತ್ತಾಗಬಹುದು. ಸಂಪೂರ್ಣ ಕಾರ್ಯಾಚರಣೆ ಮುಗಿಯಲು 18ರಿಂದ 20 ತಾಸು ಬೇಕಾಗಬಹುದು ಎಂದಿದ್ದಾರೆ.

ಮಳೆಯಿಂದಾಗಿ ಕಟ್ಟಡ ಕುಸಿದಿರಬಹುದೇ ಎಂಬುದನ್ನು ಕೇಳಿದಾಗ ಕಟ್ಟಡ ಕುಸಿತಕ್ಕೆ ಮಳೆ ಕಾರಣ ಎಂದು ಭಾವಿಸುತ್ತಿಲ್ಲ. ಕಟ್ಟಡ ನಿರ್ಮಾಣದಲ್ಲಿ ರಚನಾತ್ಮಕ ದೋಷವಿದೆ. ಆದರೆ ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.

ವೈದ್ಯಕೀಯ ನೆರವಿಗಾಗಿ ಆಂಬ್ಯುಲೆನ್ಸ್ ಹಾಗೂ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿದೆ.

ಕಾರ್ಮಿಕರ ವಾಸಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿ 19ಮಂದಿ ಕಾರ್ಮಿಕರು ವಾಸಿಸುತ್ತಿದ್ದರು. ಆದರೆ ಅವಘಡದ ವೇಳೆ ಎಲ್ಲರೂ ಇರಲಿಲ್ಲ ಎಂಬುದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.