ಗುವಾಹಟಿ: ಅಸ್ಸಾಂನ ಪ್ರಖ್ಯಾತ ‘ಮನೋಹರಿ ಗೋಲ್ಡ್ ಟೀ’ ತೋಟದ 1 ಕಿಲೋಗ್ರಾಂ ಚಹಾ ಎಲೆ ₹1.15 ಲಕ್ಷಕ್ಕೆ ಹರಾಜಾಗುವ ಮೂಲಕ ಚಹಾ ಮಾರಾಟದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಅಸ್ಸಾಂನ ದಿಬ್ರುಗಢ ಜಿಲ್ಲೆಯ ಚಹಾ ತೋಟವೊಂದರಲ್ಲಿ ಈ ವಿಶೇಷ ತಳಿಯ ಚಹಾ ಗಿಡವನ್ನು ಬೆಳೆಯಲಾಗುತ್ತದೆ. ಹೈದರಾಬಾದ್ ಮೂಲದ ತನ್ನ ಗ್ರಾಹಕರಾದ ಕೆಫೆ ನಿಲೋಫರ್‌ಗಾಗಿ ‘ಆರ್‌ಕೆ ಟೀ ಸೇಲ್ಸ್’ ಎಂಬ ಸಂಸ್ಥೆಯು ಶುಕ್ರವಾರ ಖಾಸಗಿ ಹರಾಜಿನಲ್ಲಿ ಭಾರಿ ಮೊತ್ತ ತೆತ್ತು ಚಹಾದ ಎಲೆಗಳನ್ನು ಖರೀದಿಸಿದೆ.
2021ರ ಡಿಸೆಂಬರ್‌ನಲ್ಲಿ ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ ನಡೆದಿದ್ದ ಚಹಾ ಹರಾಜಿನಲ್ಲಿ ಮನೋಹರಿ ಗೋಲ್ಡ್
ಟೀ ₹99,999ಕ್ಕೆ ಮಾರಾಟವಾಗಿತ್ತು.
ಈ ಚಹಾ ಎಲೆಗಳು 24 ಕ್ಯಾರೆಟ್ ಚಿನ್ನದಂತೆ ಕಾಣುತ್ತವೆ ಮತ್ತು ಇದು ಆರೋಗ್ಯಕರ ಪೇಯವಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಮತ್ತು ಪೋಷಕಾಂಶಗಳು ಹೇರಳವಾಗಿ ಇವೆ. ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದುಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾ ತಿಳಿಸಿದರು.
‘ಕಳೆದ ಬಾರಿ ಭಾರತದ ಚಹಾ ಮಂಡಳಿಯು ಗರಿಷ್ಠ ಹರಾಜು ಮೊತ್ತವನ್ನು ₹1 ಲಕ್ಷಕ್ಕೆ ನಿಗದಿಪಡಿಸಿತ್ತು. ಆ ಕಾರಣದಿಂದಾಗಿ 1 ಕಿಲೋ ಚಹಾ ಎಲೆ ₹99,999 ಲಕ್ಷಕ್ಕೆ ಹರಾಜಾಗಿತ್ತು. ಹಾಗಾಗಿ ಈ ಬಾರಿ ಖಾಸಗಿ ಹರಾಜಿನಲ್ಲಿ ಚಹಾ ಎಲೆ ಹರಾಜು ಮಾಡಲಾಯಿತು. ಮನೋಹರಿ ಟೀ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿರುವುದು ಸಂತಸ ತಂದಿದೆ’ ಎಂದು ಅವರು ತಿಳಿಸಿದರು.
ಜೊರ್ಹಾಟ್ ಚಹಾ ಹರಾಜು ಕೇಂದ್ರದಲ್ಲಿಜೂನ್‌ನಲ್ಲಿ ನಡೆದಿದ್ದ ಚಹಾ ಹರಾಜಿನಲ್ಲಿ ಪಭೋಜನ್ ಗೋಲ್ಡ್ ಟೀ ₹1 ಲಕ್ಷಕ್ಕೆ ಹರಾಜಾಗಿತ್ತು. ಈ ದಾಖಲೆಯನ್ನು ಮನೋಹರಿ ಗೋಲ್ಡ್ ಟೀ ಮುರಿದಿದೆ.
ಅಸ್ಸಾಂನಲ್ಲಿ 850ಕ್ಕೂ ಹೆಚ್ಚು ದೊಡ್ಡ ಚಹಾ ತೋಟಗಳಿವೆ. ಇದು ಪ್ರಪಂಚದ ಚಹಾ ಬೆಳೆಯುವ ಅತ್ಯಂತ ದೊಡ್ಡ ಪ್ರದೇಶವಾಗಿದೆ. ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ಚಹಾ ಪ್ರಮಾಣದಲ್ಲಿ ಶೇ 52ರಷ್ಟನ್ನು ಅಸ್ಸಾಂ ಒಂದೇ ರಾಜ್ಯ ಒದಗಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.