ನವದೆಹಲಿ: ಶಾಲೆಗಳಿಂದ ಹೊರಗುಳಿದಿದ್ದ ಒಂದು ಲಕ್ಷ ಬಾಲಕಿಯರನ್ನು (11–14) ಮುಖ್ಯವಾಹಿನಿಯ ಶಿಕ್ಷಣಕ್ಕೆ ಪುನಃ ತರಲಾಗಿದೆ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
ಶಾಲೆಯಿಂದ ಹೊರಗಿರುವ ಈ ವಯೋಮಾನದ ಬಾಲಕಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2013–14ನೇ ಸಾಲಿನಲ್ಲಿ 1.14 ಕೋಟಿ ಬಾಲಕಿಯರು ಶಾಲೆಗಳಿಂದ ಹೊರಗಿದ್ದರು. ಅದು 2020–21ನೇ ಸಾಲಿನಲ್ಲಿ 5 ಲಕ್ಷ, 2021–22ರಲ್ಲಿ 3.8 ಲಕ್ಷಕ್ಕೆ ಇಳಿಕೆಯಾಗಿತ್ತು. ಅಂತಿಮವಾಗಿ ಕಳೆದ ವರ್ಷದ ಜುಲೈ ವೇಳೆಗೆ ಇದು ಒಂದು ಲಕ್ಷಕ್ಕೆ ಇಳಿಕೆಯಾಗಿತ್ತು ಎಂದು ಅವರು ಅಂಕಿ ಅಂಶಗಳ ಸಹಿತ ತಿಳಿಸಿದ್ದಾರೆ.
ಅನೇಕ ನಕಲಿ ಫಲಾನುಭವಿಗಳು ಮತ್ತು ತಪ್ಪು ನಮೂದುಗಳನ್ನು ಅಳಿಸಿದ್ದರ ಪರಿಣಾಮ ಸಂಖ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ ಎಂದು ಅವರು ವಿವರಿಸಿದ್ದಾರೆ.
‘ಒಂದು ಲಕ್ಷ ಬಾಲಕಿಯರನ್ನು ಮುಖ್ಯ ವಾಹಿನಿಯ ಶಿಕ್ಷಣಕ್ಕೆ ಮರಳಿ ತರಲಾಗಿದೆ. ಅಲ್ಲದೆ ಹದಿಹರೆಯದ ಬಾಲಕಿಯರಿಗಾಗಿ ಇದ್ದ ಯೋಜನೆಯನ್ನು ಪರಿಷ್ಕರಿಸಿ, ಅದನ್ನು ‘ಸಕ್ಷಮ್ ಅಂಗನವಾಡಿ’ ಮತ್ತು ‘ಪೋಷಣ್ 2.0’ ಅಡಿಯಲ್ಲಿ ಉಪಯೋಜನೆಯಾಗಿ ಜಾರಿಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.