ADVERTISEMENT

ದೇಶದ ಮುಂದಿರುವ ಎಲ್ಲ ಸವಾಲುಗಳನ್ನು ಒಬ್ಬ ನಾಯಕನೇ ನಿವಾರಿಸಲಾರ: ಮೋಹನ ಭಾಗವತ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:36 IST
Last Updated 10 ಆಗಸ್ಟ್ 2022, 4:36 IST
ಮೋಹನ ಭಾಗವತ್
ಮೋಹನ ಭಾಗವತ್   

ನಾಗ್ಪುರ: ‘ಈ ದೇಶದ ಮುಂದಿರುವ ಎಲ್ಲ ಸವಾಲುಗಳನ್ನು ಒಬ್ಬ ನಾಯಕನೇ ನಿವಾರಿಸಲು ಸಾಧ್ಯವಿಲ್ಲ. ಒಂದು ಸಂಘಟನೆ ಅಥವಾ ಪಕ್ಷದಿಂದಲೇ ಬದಲಾವಣೆ ತರಲು ಸಾಧ್ಯವಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ ಭಾಗವತ್ ಮಂಗಳವಾರ ಹೇಳಿದರು.

ಮರಾಠಿ ಸಾಹಿತ್ಯ ಸಂಘಟನೆ ‘ವಿದರ್ಭ ಸಾಹಿತ್ಯ ಸಂಘ’ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ವಿಚಾರವೇ ಆರ್‌ಎಸ್‌ಎಸ್‌ ಸಿದ್ಧಾಂತದ ತಳಹದಿಯೂ ಆಗಿದೆ. ಅಲ್ಲದೇ, ಒಬ್ಬ ನಾಯಕನೇ ಎಲ್ಲ ಸವಾಲುಗಳನ್ನು ನಿವಾರಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಎಂಥ ದೊಡ್ಡ ನಾಯಕನೇ ಆಗಿದ್ದರೂ, ಆತನಿಂದ ಇದು ಸಾಧ್ಯವಿಲ್ಲ’ ಎಂದರು.

ADVERTISEMENT

‘ಸಾಮಾನ್ಯ ಜನರು ಬೀದಿಗಿಳಿದು ಹೋರಾಟ ನಡೆಸಿದ್ದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಕೊಡುಗೆಯೂ ದೊಡ್ಡದಿದೆ. ಸುಭಾಶ್ಚಂದ್ರ ಬೋಸ್‌ ಅವರು ಬ್ರಿಟಿಷರಿಗೇ ಸವಾಲಾಗಿ ಪರಿಣಮಿಸಿದ್ದರು. ಅವರಿಂದಾಗಿ ಸಾಮಾನ್ಯ ಪ್ರಜೆಯೂ ಧೈರ್ಯದಿಂದ ಸಂಗ್ರಾಮದಲ್ಲಿ ಧುಮುಕುವಂತಾಯಿತು’ ಎಂದು ಹೇಳಿದರು.

‘ಹಿಂದೂ ಸಮಾಜ ತನ್ನ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸುವಷ್ಟು ಸಾಮರ್ಥ್ಯವನ್ನು ಹೊಂದಬೇಕು. ಸಮಾಜವೇ ನಾಯಕರನ್ನು ಸೃಷ್ಟಿಸುತ್ತದೆಯೇ ಹೊರತು ನಾಯಕರು ಸಮಾಜವನ್ನು ನಿರ್ಮಿಸಲಾರರು’ ಎಂದೂ ಅವರು ಹೇಳಿದರು.

‘ಜನರು ದೇಶದ ಸ್ಥಿತಿಯನ್ನು ಸುಧಾರಿಸುವ ಗುತ್ತಿಗೆಯನ್ನು ಇತರರಿಗೆ ನೀಡಬಾರದು. ಆರ್‌ಎಸ್‌ಎಸ್‌ಗೆ ಸಹ ಈ ಜವಾಬ್ದಾರಿಯನ್ನು ಹೊರಿಸಬಾರದು. ಬದಲಾಗಿ, ಜನರೇ ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ನಿಮಗೆ ವಹಿಸಿದ ಕಾರ್ಯವನ್ನು ನೀವು ಮಾಡಿದರೆ ಸಾಕು, ಇತರರು ಅದನ್ನು ನೋಡಿ ಕಲಿಯುತ್ತಾರೆ’ ಎಂದು ಭಾಗವತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.