ADVERTISEMENT

ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ನೀತಿಯಲ್ಲಿ ಮೋದಿ ನಂಬಿಕೆ: ಕಾಂಗ್ರೆಸ್

ಪಿಟಿಐ
Published 9 ಸೆಪ್ಟೆಂಬರ್ 2023, 11:06 IST
Last Updated 9 ಸೆಪ್ಟೆಂಬರ್ 2023, 11:06 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಅದಾನಿ ಸಮೂಹದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಜಿ20 ಶೃಂಗಸಭೆಯ ಘೋಷಣೆಯಾಗಿದೆ. ಆದರೆ, ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ಸಮೂಹ’ದಲ್ಲಿ ನಂಬಿಕೆ ಹೊಂದಿರುವಂತೆ ತೋರುತ್ತಿದೆ ಎಂದು ಟೀಕಿಸಿದೆ.

2023ರ ಜಿ20 ಶೃಂಗಸಭೆ ಪ್ರಾರಂಭವಾಗಿದೆ, ಇಲ್ಲಿ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆಗೆ ಕಡಿವಾಣ ಹಾಕಲು ಜಾಗತಿಕ ಮಟ್ಟದ ಹಿಂದಿನ ಸಭೆಗಳಲ್ಲಿ ಮೋದಿ ಅವರು ನೀಡಿದ ಹಲವು ಭಾಷಣಗಳನ್ನು ನೆನಪಿಸಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

2018ರಲ್ಲಿ ಬ್ಯೂನಸ್‌ ಐರಿಸ್‌‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ ಅವರು ಪಲಾಯನಗೈಯುವ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಆಸ್ತಿ ವಶಕ್ಕಾಗಿ ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ಮಂಡಿಸಿದ್ದರು ಎಂದು ರಮೇಶ್‌ ತಿಳಿಸಿದ್ದಾರೆ.

ADVERTISEMENT

ನೀರವ್‌ ಮೋದಿ, ಲಲಿತ್‌ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ ಮಲ್ಯ ಅವರಂತಹ ಆರ್ಥಿಕ ಅಪರಾಧಿಗಳು ದೇಶದಿಂದ ಪಲಾಯನ ಮಾಡಲು ಬಿಜೆಪಿ ನೆರವಾಗಿದೆ. ಹಾಗಾಗಿ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆಗೆ ಕಡಿವಾಣ ಹಾಕಲು ಪ್ರಧಾನಿ ಕಾರ್ಯಸೂಚಿಯನ್ನು ಮಂಡಿಸುವುದು ನಗೆಪಾಟಲಿಗೀಡಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಜಿ20 ಶೃಂಗಸಭೆಯ ಘೋಷಣೆಯಾಗಿದೆ. ಆದರೆ, ವಾಸ್ತವವಾಗಿ ಪ್ರಧಾನಿ ಮೋದಿ ಅವರು, ‘ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಉದ್ಯಮ ಸಮೂಹ’ ಎಂದು ನಂಬಿರುವಂತೆ ತೋರುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್, ಅದಾನಿ ಸಮೂಹದ ಮೇಲೆ ಷೇರು ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ ಮತ್ತು ಲೆಕ್ಕಪತ್ರಗಳ ಅಕ್ರಮದಲ್ಲಿ ತೊಡಗಿದ ಆರೋಪವನ್ನು ಹೊರಿಸಿತ್ತು. ಆದರೆ ಈ ಎಲ್ಲ ಆರೋಪಗಳನ್ನು ಅದಾನಿ ಸಮೂಹವು ತಿರಸ್ಕರಿಸಿತ್ತು.

ಇದೀಗ ಗೌತಮ್‌ ಅದಾನಿ ಸಮೂಹದ ಹಣಕಾಸು ವ್ಯವಹಾರಗಳ ಕುರಿತು ಕಾಂಗ್ರೆಸ್‌ ಪ್ರಶ್ನೆ ಮಾಡುತ್ತಿದ್ದು, ಜಂಟಿ ಸಂಸದೀಯ ಸಮಿತಿ ತನಿಖೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.