ADVERTISEMENT

ಒಂದು ದೇಶ, ಒಂದು ಚುನಾವಣೆ: ಅಧ್ಯಕ್ಷೀಯ ವ್ಯವಸ್ಥೆ ಜಾರಿಗೆ ಯೋಜನೆ; ಜಯಂತ್ ಪಾಟೀಲ್

ಪಿಟಿಐ
Published 19 ಸೆಪ್ಟೆಂಬರ್ 2024, 11:18 IST
Last Updated 19 ಸೆಪ್ಟೆಂಬರ್ 2024, 11:18 IST
<div class="paragraphs"><p>ಜಯಂತ್‌ ಪಾಟೀಲ್</p></div>

ಜಯಂತ್‌ ಪಾಟೀಲ್

   

ಮುಂಬೈ: ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಉಪಕ್ರಮವು ಅಮೆರಿಕ ರೀತಿಯ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೊಳಿಸುವ ಯೋಜನೆಯಾಗಿದೆ ಎಂದು ಮಹಾರಾಷ್ಟ್ರ ಎನ್‌ಸಿಪಿ (ಶರದ್ ಪವಾರ್ ಬಣ) ಅಧ್ಯಕ್ಷ ಜಯಂತ್‌ ಪಾಟೀಲ್ ಆರೋಪಿಸಿದ್ದಾರೆ.

‘ಬಿಜೆಪಿ ತನ್ನ ಆಡಳಿತ ಅವಧಿಯಲ್ಲೇ ಲೋಕಸಭೆ ಚುನಾವಣೆಯನ್ನು ವಿವಿಧ ಹಂತಗಳಲ್ಲಿ ನಡೆಸಿದೆ. ಹೀಗಿರುವಾಗ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಸರ್ಕಾರ ಹೇಗೆ ಯೋಜನೆ ರೂಪಿಸುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ‘ಒಂದು ದೇಶ, ಒಂದು ಚುನಾವಣೆ’ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಡಾ. ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ಪ್ರಜಾಸತ್ತಾತ್ಮಕ ಚೌಕಟ್ಟನ್ನು ನಾಶಗೊಳಿಸುವ ಮೊದಲ ಹೆಜ್ಜೆಯಾಗಿದೆ. ಇದು ಭಾರತದಲ್ಲಿ ಅಮೆರಿಕ ರೀತಿಯ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ಪರಿಚಯಿಸುವ ನಡೆಯಾಗಿದೆ’ ಎಂದು ಹೇಳಿದ್ದಾರೆ.

‘ಸಂವಿಧಾನವನ್ನು ಬದಲಾಯಿಸುವ ಯೋಜನೆಯಿಂದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಈವರೆಗೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಚುನಾವಣೆಗಳನ್ನು ತಪ್ಪಿಸಿದೆ. ಹೀಗಿರುವಾಗ ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಆಡಳಿತಾರೂಢ ಪಕ್ಷ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ’ ಎಂದು ಪಾಟೀಲ್‌ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯುವುದಾದರೆ, ಅದು ಹೇಗೆ ಅವರು ಏಕಕಾಲದಲ್ಲಿ ಚುನಾವಣೆ ನಡೆಸುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ನೀಡಿದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಸಂಪುಟದ ತೀರ್ಮಾನವನ್ನು ಎನ್‌ಡಿಎ ಮಿತ್ರಪಕ್ಷಗಳು ಸ್ವಾಗತಿಸಿವೆ. ‘ಏಕಕಾಲಕ್ಕೆ ಚುನಾವಣೆ ನಡೆಸುವುದು ಪ್ರಾಯೋಗಿಕವಲ್ಲ’ ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ವಾಗ್ದಾಳಿ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.