ತಿರುವನಂತಪುರ: ‘ಒಂದು ದೇಶ, ಒಂದು ಚುನಾವಣೆ’ ಕಲ್ಪನೆಯು ಚುನಾವಣಾ ವೆಚ್ಚವನ್ನು ಗಂಭೀರವಾಗಿ ಕಡಿಮೆ ಮಾಡಬಹುದು. ಆದರೆ ಇದನ್ನು ಸಾಧಿಸಲು ವ್ಯಾಪಕ ರಾಜಕೀಯ ಸಮಾಲೋಚನೆ ಮತ್ತು ಸಾಂವಿಧಾನಿಕ ಬದಲಾವಣೆಗಳು ಅಗತ್ಯವಿದೆ. ಹೀಗಾಗಿ ಇದು ಸುಲಭದ ಕಾರ್ಯವಲ್ಲ’ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಹೇಳಿದ್ದಾರೆ.
ಚುನಾವಣಾ ವೆಚ್ಚ ಕಡಿಮೆ ಮಾಡುವುದು ಮತ್ತು ಪದೇ ಪದೇ ಮಾದರಿ ನೀತಿ ಸಂಹಿತೆ ಹೇರುವಿಕೆಯನ್ನು ಕಡಿಮೆ ಮಾಡುವುದೂ ಈ ಪ್ರಯತ್ನದ ಹಿಂದಿರುವ ಪ್ರಮುಖ ಉದ್ದೇಶ ಎಂದು ಅವರು ಮನೋರಮಾ ಇಯರ್‌ಬುಕ್ 2024ಕ್ಕೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.
ಪದೇ ಪದೇ ಬರುವ ನೀತಿ ಸಂಹಿತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ ಎಂಬುದು ರಾಜಕೀಯ ಪಕ್ಷಗಳ ಆರೋಪವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಚುನಾವಣಾ ಆಯೋಗದ 16ನೇ ಮುಖ್ಯ ಆಯುಕ್ತರಾಗಿದ್ದ ಚಾವ್ಲಾ ಅವರು, ಈ ವಿಷಯವು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದನ್ನು ಸಂಸದರು, ಶಾಸಕರು ಮತ್ತು ಮತದಾರರ ದೃಷ್ಟಿಕೋನದಿಂದ ಚುನಾವಣಾ ಆಯೋಗವು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗದ ದೃಷ್ಟಿಕೋನದಿಂದ ಹೇಳುವುದಾದರೆ, ‘ಒಂದು ದೇಶ, ಒಂದು ಚುನಾವಣೆ’ ಅನುಷ್ಠಾನವು ತಾಂತ್ರಿಕವಾಗಿ ಕಾರ್ಯಸಾಧ್ಯ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.