ADVERTISEMENT

ಒಂದು ರಾಷ್ಟ್ರ, ಒಂದು ಚುನಾವಣೆ ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆಗೆ ಧಕ್ಕೆ: ಎಎಪಿ

ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ಸಂವಿಧಾನದ ರಚನೆ, ಸಂಸದೀಯ ವ್ಯವಸ್ಥೆ ಹಾಗೂ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ– ಆಮ್ ಆದ್ಮಿ ಪಕ್ಷ.

ಏಜೆನ್ಸೀಸ್
Published 20 ಜನವರಿ 2024, 9:36 IST
Last Updated 20 ಜನವರಿ 2024, 9:36 IST
<div class="paragraphs"><p>ಎಎಪಿ</p></div>

ಎಎಪಿ

   

ನವದೆಹಲಿ: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಂವಿಧಾನದ ಮೂಲ ರಚನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ.

ಭಾರತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕಲ್ಪನೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸಿದೆ. ಈ ನಡುವೆ ಇಂಡಿಯಾ ಕೂಟದ ಭಾಗವಾಗಿರುವ ಎಎಪಿ ಕೂಡ ಒಂದು ರಾಷ್ಟ್ರ , ಒಂದು ಚುನಾವಣೆ ಪರಿಕಲ್ಪನೆಯನ್ನು ವಿರೋಧಿಸಿದೆ.

ADVERTISEMENT

ಶನಿವಾರದ ಹೇಳಿಕೆಯಲ್ಲಿ, ಎಎಪಿ ‘ ಒಂದು ರಾಷ್ಟ್ರ, ಒಂದು ಚುನಾವಣೆ' ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆಯನ್ನು ನಾಶಗೊಳಿಸುತ್ತದೆ. ಜತೆಗೆ ಸಂವಿಧಾನದ ಮೂಲ ರಚನೆ ಮತ್ತು ಸಂಸದೀಯ ವ್ಯವಸ್ಥೆಯನ್ನೂ ಹಾನಿಗೊಳಿಸುತ್ತದೆ. ಇದರಿಂದ ಹಂಗ್ ಅಸೆಂಬ್ಲಿ (ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟ ಸಂಪೂರ್ಣ ಬಹುಮತವನ್ನು ಪಡೆಯಲು ವಿಫಲವಾದಾಗ ಅದನ್ನು ಹಂಗ್ ಪಾರ್ಲಿಮೆಂಟ್/ಅಸೆಂಬ್ಲಿ ಎಂದು ಕರೆಯಲಾಗುತ್ತದೆ) ಸನ್ನಿವೇಶ ಉಂಟಾಗುತ್ತದೆ. ಜತೆಗೆ ಶಾಸಕರು ಮತ್ತು ಸಂಸದರ ಖರೀದಿ, ಪಕ್ಷಾಂತರ ವಿರೋಧಿ ನೀತಿಯನ್ನು ಇದು ಪ್ರೋತ್ಸಾಹಿಸುತ್ತದೆ ಎಂದು ಎಎಪಿ ಹೇಳಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಉಳಿಯುವ ವೆಚ್ಚ ಅಂದಾಜು ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್‌ನ ಕೇವಲ 0.1 ಪ್ರತಿಶತವಾಗಿದೆ ಎಂದೂ ಅದು ಹೇಳಿದೆ.

‘ಅಲ್ಪ ಆರ್ಥಿಕ ಲಾಭ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ತ್ಯಾಗ ಮಾಡಲಾಗುವುದಿಲ್ಲ' ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಕೋವಿಂದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ:

'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಕಳೆದ ವರ್ಷದ ಆರಂಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಸಲಹೆಗಳನ್ನು ಕೇಳುವಂತೆ ಸರ್ಕಾರ 6 ರಾಷ್ಟ್ರೀಯ ಪಕ್ಷಗಳು ಮತ್ತು 33 ರಾಜ್ಯ ಪಕ್ಷಗಳಿಗೆ ಪತ್ರ ಬರೆದಿತ್ತು.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ 'ಒಂದು ರಾಷ್ಟ್ರ, ಒಂದು ಚುನಾವಣೆ' ಉನ್ನತ ಮಟ್ಟದ ಸಮಿತಿಯು ಈ ಬಗ್ಗೆ ಸಮಾಲೋಚನೆ ನಡೆಸಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯದ ಪ್ರಕಾರ, ಈ ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿ, ನಾಗರಿಕರು, ರಾಜಕೀಯ ಪಕ್ಷಗಳು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸಾಂವಿಧಾನಿಕ ತಜ್ಞರು ಮತ್ತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಳಲಾಗುತ್ತದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವನ್ನು ವಿರೋಧಿಸಿದ್ದಾರೆ. ‘ಸಂಸದೀಯ ಆಡಳಿತ ವ್ಯವಸ್ಥೆಯಲ್ಲಿ ಏಕಕಾಲದಲ್ಲಿ ಚುನಾವಣೆ ಪರಿಕಲ್ಪನೆಗೆ ಅವಕಾಶವಿಲ್ಲ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.