ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು; ನಂತರದ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂಬ ಶಿಫಾರಸು ಹೊಂದಿರುವ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತಾಧಿಕಾರ ಸಮಿತಿಯು ರಾಷ್ಟ್ರಪತಿಯವರಿಗೆ ಸಲ್ಲಿಸಿದೆ.
‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯ ಸಾಧಕ–ಬಾಧಕಗಳನ್ನು ಪರಿಶೀಲಿಸಲು ಸರ್ಕಾರವು ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸಿತ್ತು.
2023ರ ಸೆಪ್ಟೆಂಬರ್ 2ರಿಂದ 191 ದಿನಗಳ ಸಂಶೋಧನೆ, ಅಭಿಪ್ರಾಯ ಸಂಗ್ರಹ, ಸಮಾಲೋಚನೆಯ ಬಳಿಕ ಸಮಿತಿಯು 18,626 ಪುಟಗಳ ವರದಿ ಸಿದ್ಧಪಡಿಸಿದೆ. ಆದರೆ, ಇದರಲ್ಲಿ 321 ಪುಟಗಳ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಿದೆ.
2029ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಕಾನೂನು ಆಯೋಗವು ಶೀಘ್ರದಲ್ಲೇ ಪ್ರತ್ಯೇಕ ಶಿಫಾರಸು ಮಾಡುವ ಸಾಧ್ಯತೆಯಿದೆ. ಆದರೆ ಕೋವಿಂದ್ ನೇತೃತ್ವದ ಸಮಿತಿಯು ಹೊಸ ವ್ಯವಸ್ಥೆ ಯಾವಾಗಿಂದ ಜಾರಿಯಾಗಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ.
‘ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲು ಕಾರಣವಾಗುತ್ತದೆಯಲ್ಲದೆ, ದೇಶದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯನ್ನು ಇನ್ನಷ್ಟು ಭದ್ರಪಡಿಸಲಿದೆ. ಇದು ‘ಇಂಡಿಯಾ, ಅಂದರೆ ಭಾರತ’ದ ಆಶಯವನ್ನು ಸಾಕಾರಗೊಳಿಸುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಈಗ ಪ್ರತಿವರ್ಷ ಹಲವಾರು ಚುನಾವಣೆಗಳು ನಡೆಯುತ್ತಿವೆ. ಇದರಿಂದಾಗಿ ಸರ್ಕಾರ, ಚುನಾವಣಾ ಸಿಬ್ಬಂದಿ, ನ್ಯಾಯಾಲಯಗಳು, ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.
‘ಸಮಿತಿಯು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಶಿಫಾರಸುಗಳನ್ನು ರೂಪಿಸಿದೆ. ಹೊಸ ವ್ಯವಸ್ಥೆಯ ಜಾರಿಗೆ ಸಂವಿಧಾನಕ್ಕೆ ಕನಿಷ್ಠ ತಿದ್ದುಪಡಿಗಳಷ್ಟೇ ಸಾಕು’ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ವಿವಿಧ ದೇಶಗಳ ಚುನಾವಣಾ ಪ್ರಕ್ರಿಯೆ ಅಧ್ಯಯನ: ಕೋವಿಂದ್ ನೇತೃತ್ವದ ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಯಲ್ಲಿರುವ ಏಳು ದೇಶಗಳ ಚುನಾವಣಾ ಪ್ರಕ್ರಿಯೆಯ ಅಧ್ಯಯನ ನಡೆಸಿದೆ. ದಕ್ಷಿಣ ಆಫ್ರಿಕಾ, ಸ್ವೀಡನ್, ಬೆಲ್ಜಿಯಂ, ಜರ್ಮನಿ, ಜಪಾನ್, ಫಿಲಿಪ್ಪೀನ್ಸ್ ಮತ್ತು ಬೆಲ್ಜಿಯಂನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಇಂಡೊನೇಷ್ಯಾದಲ್ಲಿ ಇದೇ ವರ್ಷದ ಫೆಬ್ರುವರಿಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದಿತ್ತು.
ಕೋವಿಂದ್ ಅವರು ರಾಷ್ಟ್ರಪತಿಗೆ ವರದಿ ಸಲ್ಲಿಸುವ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ರಾಜ್ಯಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಜತೆಗಿದ್ದರು.
ಸಮಿತಿಯ ಪ್ರಮುಖ ಶಿಫಾರಸುಗಳು...
ಮೂರು ಸ್ತರದ ಚುನಾವಣೆ (1. ಲೋಕಸಭೆ, 2. ರಾಜ್ಯ ವಿಧಾನಸಭೆಗಳು ಮತ್ತು 3. ಪುರಸಭೆ ಹಾಗೂ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು) ಎರಡು ಹಂತಗಳಲ್ಲಿ ನಡೆಯಲಿವೆ.
ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು
ಎರಡನೇ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆದ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು
ಅತಂತ್ರ ಲೋಕಸಭೆ ನಿರ್ಮಾಣವಾದರೆ ಅಥವಾ ಸರ್ಕಾರ ಬಹುಮತ ಕಳೆದುಕೊಂಡರೆ ಹೊಸದಾಗಿ ಚುನಾವಣೆ ನಡೆಯಬೇಕು. ಹೊಸದಾಗಿ ಚುನಾವಣೆ ನಡೆದ ಬಳಿಕ ಅಧಿಕಾರಕ್ಕೇರುವ ಸರ್ಕಾರದ ಅವಧಿಯು ಲೋಕಸಭೆಯ ಇನ್ನುಳಿದ ಅವಧಿಗೆ ಮಾತ್ರ ಇರಲಿದೆ
ರಾಜ್ಯ ವಿಧಾಸಭೆಗಳಿಗೆ ಮಧ್ಯಂತರ ಚುನಾವಣೆ ನಡೆದರೆ, ಹೊಸ ಸರ್ಕಾರದ ಅವಧಿಯು ಲೋಕಸಭೆಯ ಅವಧಿ ಕೊನೆಗೊಳ್ಳುವವರೆಗೆ ಮಾತ್ರ ಇರಲಿದೆ
ಸಂವಿಧಾನಕ್ಕೆ ಒಟ್ಟು 18 ತಿದ್ದುಪಡಿಗಳನ್ನು ತರಬೇಕಿದೆ.
ಪ್ರಮುಖವಾಗಿ ಸಂವಿಧಾನದ 83 (ಸಂಸತ್ತಿನ ಸದನಗಳ ಅವಧಿ), 172 (ರಾಜ್ಯ ವಿಧಾನಸಭೆಗಳ ಅವಧಿ) ಮತ್ತು 325 (ಮತದಾರರ ಪಟ್ಟಿಗೆ ಸಂಬಂಧಿಸಿದ) ವಿಧಿಗಳಿಗೆ ತಿದ್ದುಪಡಿ ಆಗಬೇಕು.
ಈ ತಿದ್ದುಪಡಿಗಳು ಜಾರಿಗೆ ಬರಲು ರಾಜ್ಯಗಳ ಅನುಮೋದನೆಯ ಅಗತ್ಯ ಇಲ್ಲ
ಭಾರತೀಯ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಒಂದೇ ಮತದಾರರ ಪಟ್ಟಿ ಮತ್ತು ಗುರುತಿನ ಚೀಟಿಗಳನ್ನು ಸಿದ್ಧಪಡಿಸುವುದು
ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಐತಿಹಾಸಿಕ ಕ್ಷಣಅಮಿತ್ ಶಾ ಗೃಹ ಸಚಿವ
ಬಿಜೆಪಿಯ ನಿಜವಾದ ಗುರಿ ‘ಒನ್ ನೇಷನ್ ನೋ ಎಲೆಕ್ಷನ್’. ಆ ಮೂಲಕ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸಲು ಹೊರಟಿದೆಜೈರಾಂ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
‘ಒಂದು ದೇಶ ಒಂದು ಚುನಾವಣೆ’ಯು ಭಾರತದ ಒಕ್ಕೂಟ ವ್ಯವಸ್ಥೆಗೆ ಮರಣಶಾಸನವಾಗಿದೆ. ಭಾರತವನ್ನು ‘ಒಂದು ಪಕ್ಷ’ದ ದೇಶವನ್ನಾಗಿಸಲಿದೆಅಸಾದುದ್ದೀನ್ ಒವೈಸಿ ಎಐಎಂಐಎಂ ಮುಖ್ಯಸ್ಥ
32 ಪಕ್ಷಗಳ ಬೆಂಬಲ
ಉನ್ನತಾಧಿಕಾರ ಸಮಿತಿಯು ‘ಒಂದು ದೇಶ ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಒಟ್ಟು 62 ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಿದ್ದು 47 ಪಕ್ಷಗಳು ತಮ್ಮ ಅಭಿಪ್ರಾಯ ನೀಡಿವೆ. ‘ಅದರಲ್ಲಿ 32 ಪಕ್ಷಗಳು ಹೊಸ ವ್ಯವಸ್ಥೆ ಜಾರಿಗೆ ತರುವುದಕ್ಕೆ ಒಪ್ಪಿಗೆ ಸೂಚಿಸಿದ್ದು 15 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ’ ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಎಎಪಿ ಬಿಎಸ್‌ಪಿ ಮತ್ತು ಸಿಪಿಎಂ ವಿರೋಧ ವ್ಯಕ್ತಪಡಿಸಿದರೆ ಬಿಜೆಪಿ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ಬೆಂಬಲಿಸಿವೆ. ಪ್ರಾದೇಶಿಕ ಪಕ್ಷಗಳಲ್ಲಿ ಎಐಯುಡಿಎಫ್ ಟಿಎಂಸಿ ಎಐಎಂಐಎಂ ಸಿಪಿಐ ಡಿಎಂಕೆ ನಾಗಾ ಪೀಪಲ್ಸ್ ಫ್ರಂಟ್ ಮತ್ತು ಸಮಾಜವಾದಿ ಪಕ್ಷಗಳು ವಿರೋಧಿಸಿವೆ.
ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ವಿರೋಧ
‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದವರಲ್ಲಿ ಹೈಕೋರ್ಟ್‌ನ ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಸೇರಿದ್ದಾರೆ. ಸಮಿತಿಯು ಹೈಕೋರ್ಟ್‌ನ ಒಟ್ಟು 12 ಮಂದಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಅಭಿಪ್ರಾಯ ಕೇಳಿತ್ತು. ಅದರಲ್ಲಿ ಒಂಬತ್ತು ಮಂದಿ ಬೆಂಬಲ ಸೂಚಿಸಿದ್ದಾರೆ. ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗಿರೀಶ್ ಚಂದ್ರ ಗುಪ್ತಾ ಮತ್ತು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಅವರು ವಿರೋಧ ವ್ಯಕ್ತಪಡಿಸಿದವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ರಂಜನ್ ಗೊಗೊಯ್ ಶರದ್ ಅರವಿಂದ್ ಬೊಬ್ಡೆ ಮತ್ತು ಯು.ಯು. ಲಲಿತ್ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ಬೆಂಬಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.