ADVERTISEMENT

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 13:38 IST
Last Updated 23 ಡಿಸೆಂಬರ್ 2018, 13:38 IST
ಯೋಗಿ ಆದಿತ್ಯನಾಥ  (ಕೃಪೆ: ಪಿಟಿಐ)
ಯೋಗಿ ಆದಿತ್ಯನಾಥ (ಕೃಪೆ: ಪಿಟಿಐ)   

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಭಾನುವಾರ ಲಖನೌದ ಸ್ಮೃತಿ ಉಪವನದಲ್ಲಿ ಯುವ ಕುಂಭ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೋಗಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಅದರಲ್ಲಿ ಯಾವ ಸಂದೇಹವೂ ಬೇಡ.ಬೇರೆ ಯಾವುದೇ ಪಕ್ಷಕ್ಕೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲಿ ನೆರೆದಿದ್ದ ಜನರು ವೋಟ್ ವಹೀ ಪಾಯೇಗಾ, ಮಂದಿರ್ ಜೋ ಬನಾಯೇಗಾ (ಮಂದಿರ ನಿರ್ಮಿಸುವವರಿಗೆ ಮಾತ್ರ ಮತ) ಎಂದು ಘೋಷಣೆ ಕೂಗಿದ್ದಾರೆ.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಯೋಗಿ, ಮತಕ್ಕಾಗಿ ಅವರು ಜನಿವಾರವನ್ನು ಪ್ರದರ್ಶಿಸುತ್ತಾರೆ.ಅವರು ಶ್ರೀರಾಮ ಮತ್ತು ಶ್ರೀ ಕೃಷ್ಣನ ಅಸ್ತಿತ್ವವನ್ನು ಪ್ರಶ್ನಿಸುವವರು. ಅಂಥವರು ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದಿದ್ದಾರೆ.

ADVERTISEMENT

ಅದೇ ವೇಳೆ ಇತಿಹಾಸಕಾರರನ್ನು ಮತ್ತು ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನಮ್ಮ ಇತಿಹಾಸದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದರು.ಅದನ್ನು ಈಗ ತಿದ್ದಿ ಸರಿಪಡಿಸಬೇಕಾದ ಹೊಣೆ ನಮಗೆ ಇದೆ. ರಾಮಾಯದಲ್ಲಿ ಉಲ್ಲೇಖಿಸಲಾದ ಪುಷ್ಪಕ ವಿಮಾನ ಕಾಲ್ಪನಿಕ ಅಲ್ಲ, ಅದು ಸತ್ಯ. ಮುನಿ ಭಾರದ್ವಾಜರು ವಿಮಾನ ಶಾಸ್ತ್ರ ಬರೆದಿದ್ದು ಅದರಲ್ಲಿ ಪುಷ್ಪಕ ವಿಮಾನದ ಸಿದ್ಧಾಂತ ಇದೆ.
ಪ್ರಯಾಗ್‍ರಾಜ್‍ನಲ್ಲಿ ನಡೆಯಲಿರುವ ಕುಂಭ ಮೇಳದ ಸಿದ್ಧತೆ ಬಗ್ಗೆ ವಿವರಿಸಿದ ಆದಿತ್ಯನಾಥ, ಹಿಂದೂ ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಅವಮಾನಿಸಲಾಗುತ್ತಿದೆ. ಕುಂಭಮೇಳವನ್ನು ಯುವ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಮತ್ತು ಪರಿಸರ ವಿರೋಧಿ ಎಂದು ಹೇಳಲಾಗುತ್ತಿದೆ.ಪ್ರಯಾಗ್ರಾಜ್ ಕುಂಭಮೇಳ ಭಾರತದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುತ್ತಿದೆ ಎಂದಿದ್ದಾರೆ.

ಜನವರಿ 15 ಮಕರ ಸಂಕ್ರಾತಿಯಂದು ಕುಂಭಮೇಳ ಆರಂಭವಾಗಲಿದ್ದು ಮಾರ್ಚ್ 4ರ ಶಿವರಾತ್ರಿಗೆ ಕೊನೆಗೊಳ್ಳಲಿದೆ.

ಈ ವಿಷಯಗಳ ಜತೆ ಸರ್ಕಾರದ ಸಾಧನೆಯ ಬಗ್ಗೆ ಹೇಳಲು ಯೋಗಿ ಮರೆತಿಲ್ಲ.ನಾವು ರಾಜ್ಯದಲ್ಲಿ ಅಧಿಕಾರಕ್ಕೇರಿದ ನಂತರ ಯುವಜನರಿಗೆ ಪ್ರೋತ್ಸಾಹ ನೀಡಿ, ಅವರ ಸಾಮರ್ಥ್ಯವನ್ನು ತೋರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಕಳೆದ ಒಂದೂವರೆ ವರ್ಷದಲ್ಲಿ ಒಂದು ಲಕ್ಷಕ್ಕಿಂತ ಯುವಕರಿಗೆ ಉದ್ಯೋಗ ಸಿಕ್ಕಿದೆ. 50,000 ಪೊಲೀಸರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದುಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.