ನವದೆಹಲಿ: ‘ಗೂಢಚರ್ಯೆ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಲ್ ಮ್ಯಾಕ್ರಾನ್ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಜತೆ ಗೂಢಚರ್ಚೆ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಚಿದಂಬರಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ದೂರವಾಣಿಯನ್ನು ಪೆಗಾಸಸ್ ತಂತ್ರಾಂಶದ ಮೂಲಕ ಮೊರೊಕ್ಕೊದ ಭದ್ರತಾ ಪಡೆಗಳು ಗೂಢಚರ್ಯೆ ನಡೆಸಿವೆ ಎನ್ನುವ ವರದಿಗಳ ಬಗ್ಗೆ ಮ್ಯಾಕ್ರಾನ್ ಅವರು ಬೆನ್ನೆಟ್ ಅವರ ಜತೆ ಜುಲೈ 22ರಂದು ಚರ್ಚಿಸಿದ್ದರು.
‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಇಸ್ರೇಲ್ ಪ್ರಧಾನಿ ಬೆನ್ನೆಟ್ ಜತೆ ಚರ್ಚಿಸಿ ಪೆಗಾಸಸ್ ಗೂಢಚರ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಕೋರಿದ್ದಾರೆ. ಈ ವಿಷಯದ ಬಗ್ಗೆ ಕೈಗೊಂಡಿರುವ ತನಿಖೆಯ ಬಗ್ಗೆ ಮಾಹಿತಿ ನೀಡುವುದಾಗಿ ಬೆನ್ನೆಟ್ ಭರವಸೆ ನೀಡಿದ್ದಾರೆ. ಆದರೆ, ಇಂತಹ ಮಹತ್ವದ ಮತ್ತು ಗಂಭೀರ ವಿಷಯದ ಬಗ್ಗೆ ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗದಿರುವುದು ಭಾರತ ಸರ್ಕಾರ ಮಾತ್ರ’ ಎಂದು ಹೇಳಿದ್ದಾರೆ.
‘ಗೂಢಚರ್ಯೆ ನಡೆಯುತ್ತಿರುವುದು ಸರ್ಕಾರಕ್ಕೆ ಗೊತ್ತಿರುವ ಕಾರಣದಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ? ಹೀಗಾಗಿಯೇ, ಇಸ್ರೇಲ್ ಅಥವಾ ಎನ್‌ಎಸ್‌ಒ ಕಂಪನಿಯಿಂದ ಹೆಚ್ಚಿನ ಮಾಹಿತಿಯನ್ನು ಇದೇ ಕಾರಣಕ್ಕೆ ಕೋರುತ್ತಿಲ್ಲ ಅನಿಸುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.