ಶಿಲ್ಲಾಂಗ್: ‘ಮೇಘಾಲಯ ರಾಜ್ಯದಲ್ಲಿರುವ ಒಟ್ಟು ಪ್ರಾಣಿ ಪ್ರಭೇದಗಳಲ್ಲಿ ಈವರೆಗೆ ಐದನೇ ಒಂದು ಭಾಗದಷ್ಟು ಪ್ರಭೇದಗಳನ್ನು ಮಾತ್ರ ಪತ್ತೆ ಮಾಡಲಾಗಿದೆ‘ ಎಂದು ಮುಖ್ಯ ವನ್ಯಜೀವಿ ಪರಿಪಾಲಕ ಎಚ್.ಸಿ.ಚೌಧರಿ ಹೇಳಿದ್ದಾರೆ.
ಈ ರಾಜ್ಯದಲ್ಲಿ ಅಂದಾಜು 50 ಸಾವಿರ ಜಾತಿಯ ವಿವಿಧ ಪ್ರಾಣಿಗಳಿದ್ದು, ಇಲ್ಲಿವರೆಗೆ 10 ಸಾವಿರ ಜಾತಿಯ ಪ್ರಾಣಿಗಳನ್ನಷ್ಟೇ ಪತ್ತೆ ಮಾಡಲು ಸಾಧ್ಯವಾಗಿದೆ. ಉಳಿದಿರುವ ಪ್ರಾಣಿ ಪ್ರಭೇದಗಳನ್ನು ಪತ್ತೆ ಮಾಡಲು ಅರಣ್ಯ ಮತ್ತು ಪರಿಸರ ಇಲಾಖೆಯವರು, ಭಾರತೀಯ ಪ್ರಾಣಿ ಸರ್ವೇಕ್ಷಣಾ (ಝೆಡ್‌ಎಸ್‌ಐ) ಸಹಯೋಗದೊಂದಿಗೆ ಮುಂದಾಗಬೇಕು. ಈ ಮೂಲಕ ಹೆಚ್ಚು ವಿಶ್ವಾಸಾರ್ಹ ಜಿಐಎಸ್ ಆಧಾರಿತ, ಪ್ರಾಣಿ ಪ್ರಭೇದಗಳ ದತ್ತಾಂಶ ಸೃಷ್ಟಿಸಲು ಚಿಂತಿಸಬೇಕು ಎಂದು ಅವರು ಸಲಹೆ ನೀಡಿದರು.
ಗುರುವಾರ ಇಲ್ಲಿ ನಡೆದ ಝೆಡ್‌ಎಸ್‌ಐ ಸಮಾವೇಶದಲ್ಲಿ ಮಾತನಾಡಿದ ಚೌಧರಿ, ‘ಮೇಘಾಲಯದಲ್ಲಿರುವ 10,000 ಪ್ರಾಣಿ ಪ್ರಭೇದಗಳು ಮಾತ್ರ ನಮಗೆ ತಿಳಿದಿವೆ. ಪ್ರತಿ ಪ್ರಭೇದದ ಸ್ಥಳ, ಛಾಯಾಚಿತ್ರ ಮತ್ತು ಇತರೆ ವಿವರವನ್ನೊಳಗೊಂಡ ದತ್ತಾಂಶ ಲಭ್ಯವಾದರೆ, ಅದನ್ನು ಕೇಂದ್ರೀಕೃತ ಡೇಟಾಬೇಸ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಪ್ರಾಣಿ ಪ್ರಭೇದಗಳು ಪತ್ತೆಯಾಗುತ್ತಿವೆ, ಎಷ್ಟು ನಶಿಸಿ ಹೋಗುತ್ತಿವೆ ಎಂಬುದನ್ನು ತಿಳಿಯಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.