ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ ತೋ ಸೇಫ್ ಹೈ’ (ಒಗ್ಗಟ್ಟಿನಿಂದ ಇದ್ದರೆ ಸುರಕ್ಷಿತವಾಗಿರುತ್ತೇವೆ) ಮತ– ನಿರೂಪಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ‘ಸುರಕ್ಷಿತ ವ್ಯಕ್ತಿ ಮಾತ್ರ ಇಲ್ಲಿ ಸುರಕ್ಷಿತವಾಗಿದ್ದಾರೆ’ ಎಂದು ಕಟಕಿಯಾಡಿದ್ದಾರೆ.
ಮೋದಿಯವರ ಉದ್ಯಮ ಮಿತ್ರ ಹಾಗೂ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯ ಹೆಸರು ಪ್ರಸ್ತಾಪಿಸಿ, ‘ಸುರಕ್ಷಿತ ವ್ಯಕ್ತಿ’ ಎಂದು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
‘ಒಗ್ಗಟ್ಟಿನಿಂದ ಇದ್ದರೆ ಸುರಕ್ಷಿತವಾಗಿರುತ್ತೇವೆ’ ಎಂಬುದನ್ನು ಇದೀಗ ನಾವು ಕೇಳುತ್ತಿದ್ದೇವೆ. ಏನು ಸುರಕ್ಷಿತ...? ಸುರಕ್ಷಾ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಸುರಕ್ಷತೆ ಎನ್ನುವುದು ಒಂದು ಅರ್ಥವಾದರೆ, ತಿಜೋರಿ ಎನ್ನುವುದು ಇನ್ನೊಂದು ಅರ್ಥ. ಈ ತಿಜೋರಿ ಯಾರಲ್ಲಿ ಇದೆ? ಅದಾನಿ ಬಳಿಯಿದೆ... ಹೌದು... ಇದೇ ಮೋದಿಯವರ ‘ಏಕ್ ಹೈ ತೋ ಸೇಫ್ ಹೈ’ ಎನ್ನುವುದರ ಮರ್ಮ ಎಂದು ಚಂದ್ರಪುರ ಜಿಲ್ಲೆಯ ಚಿಮುರ್‌ನಲ್ಲಿ ಹಾಗೂ ನಾಗ್ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ವ್ಯಾಖ್ಯಾನಿಸಿದರು.
ಈ ಹಿಂದಿನ ಮಹಾ ವಿಕಾಸ್ ಆಘಾಡಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾರಣವಾದ ಸಭೆಗಳಲ್ಲಿ ಅದಾನಿ ಹೇಗೆ ಉಪಸ್ಥಿತರಿದ್ದರು ಎಂದು ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಕೇಳಿದರು.
ಮಹಾರಾಷ್ಟ್ರದಿಂದ ಯೋಜನೆಗಳನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕಾಗಿ ಮಹಾಯುತಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ, ‘₹10 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಮಹಾರಾಷ್ಟ್ರವು 5 ಲಕ್ಷ ಉದ್ಯೋಗ ನಷ್ಟ ಅನುಭವಿಸಿದೆ. 6 ಸಾವಿರ ಕಂಪನಿಗಳು ಬಾಗಿಲು ಮುಚ್ಚಿವೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.