ADVERTISEMENT

ಜಾರ್ಖಂಡ್ ಚುನಾವಣೆ: ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ಮತದಾನ, ಜಯದ ವಿಶ್ವಾಸ

ಪಿಟಿಐ
Published 13 ನವೆಂಬರ್ 2024, 11:03 IST
Last Updated 13 ನವೆಂಬರ್ 2024, 11:03 IST
<div class="paragraphs"><p>ಮತ ಚಲಾಯಿಸಿದ ನಗ್ಮಾ ರಾಣಿ</p></div>

ಮತ ಚಲಾಯಿಸಿದ ನಗ್ಮಾ ರಾಣಿ

   

ಪಿಟಿಐ ಚಿತ್ರ

ರಾಂಚಿ: ಜಾರ್ಖಂಡ್‌ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನದ ವೇಳೆ ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ನಗ್ಮಾ ರಾಣಿ, ಇಂದು (ಬುಧವಾರ) ಮತ ಚಲಾಯಿಸಿದ್ದಾರೆ. ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸದಲ್ಲಿರುವ ಅವರು ಜಯದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

35 ವರ್ಷದ ರಾಣಿ, ಹತಿಯಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇಲ್ಲಿ, ಬಿಜೆಪಿಯಿಂದ ನವೀನ್‌ ಜೈಸ್ವಾಲ್ ಮತ್ತು ಕಾಂಗ್ರೆಸ್‌ನಿಂದ ಅಜಯ್‌ ನಾಥ್‌ ಸಹದೇವ್‌ ಪೈಪೋಟಿ ನಡೆಸುತ್ತಿದ್ದಾರೆ.

ರಾಂಚಿಯ ಹೆಸಗ್‌ ಪ್ರದೇಶದಲ್ಲಿರುವ ಡಾನ್‌ ಬಾಸ್ಕೊ ಶಾಲೆಯಲ್ಲಿ ಮತದಾನದ ಬಳಿಕ ಮಾತನಾಡಿರುವ ರಾಣಿ, 'ನನ್ನ ಮತ ಚಲಾಯಿಸಿದ್ದೇನೆ. ಗೆಲುವು ಸಾಧಿಸುವ ವಿಶ್ವಾಸವಿದೆ' ಎಂದಿದ್ದಾರೆ.

'ಪ್ರಚಾರ ಅಭಿಯಾನದ ವೇಳೆ ದೊರೆತ ಬೆಂಬಲ ಅಚ್ಚರಿಯನ್ನುಂಟು ಮಾಡಿತ್ತು. ಆ ಬೆಂಬಲವು ನನ್ನ ಪರವಾಗಿ ಫಲಿತಾಂಶವನ್ನೂ ತರಲಿದೆ' ಎಂದು ಹೇಳಿದ್ದಾರೆ.

ಜಾರ್ಖಂಡ್‌ನ 15 ಜಿಲ್ಲೆಗಳ 43 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಕಣದಲ್ಲಿರುವ 683 ಅಭ್ಯರ್ಥಿಗಳಲ್ಲಿ ರಾಣಿ ಸಹ ಒಬ್ಬರು. ಒಟ್ಟು 609 ಪುರುಷರು ಮತ್ತು 73 ಮಹಿಳೆಯರು ಸ್ಪರ್ಧಿಸಿದ್ದಾರೆ. 

ಬಿಹಾರದ ಮಗಧ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡಿರುವ ರಾಣಿ, 'ನಾನು ಗೆದ್ದರೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ರಾಜ್ಯದ ಅರ್ಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಗೆ ಹೋಗುವ ಅಗತ್ಯವಿಲ್ಲದಂತೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕಾಗಿ ಶ್ರಮಿಸುವೆ' ಎಂದಿದ್ದಾರೆ.

23 ತೃತೀಯ ಲಿಂಗಿಗಳು ಸೇರಿದಂತೆ 4.46 ಲಕ್ಷ ಮತದಾರರು ಹತಿಯಾದಲ್ಲಿದ್ದಾರೆ. ಇಂದು ಮತದಾನ ನಡೆಯುತ್ತಿರುವ 43 ಕ್ಷೇತ್ರಗಳ ಪೈಕಿ, 17 ಸಾಮಾನ್ಯ, 30 ಪರಿಶಿಷ್ಟ ಪಂಗಡ ಮತ್ತು 6 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ. 303 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1.37 ಕೋಟಿ ಮತದಾರರು ಈ ಕ್ಷೇತ್ರಗಳಲ್ಲಿದ್ದಾರೆ.

ಮೊದಲ ಹಂತದ ಚುನಾವಣೆಗಾಗಿ 15,344 ಮತ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.