ಚೆನ್ನೈ: ತಂಪು ವಾತಾವರಣಕ್ಕೆ ಹೆಸರಾಗಿದ್ದ ತಮಿಳುನಾಡಿನ ಉದಕಮಂಡಲ ಅಥವಾ ಊಟಿಯಲ್ಲಿ ಭಾನುವಾರ ಮತ್ತು ಸೋಮವಾರ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಬರುವ ಈ ಹೆಸರಾಂತ ಪ್ರವಾಸಿ ತಾಣದಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಬಹುತೇಕ ಶೂನ್ಯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ತೀವ್ರತರನಾದ ಚಳಿಯ ವಾತಾವರಣ ಆವರಿಸಿತ್ತು.
ಈ ಚಳಿಗಾಲ ಮತ್ತು ಬೇಸಿಗೆ ಅವಧಿಯಲ್ಲಿ ದಾಖಲಾಗಿರುವ ಭಿನ್ನ ತೀವ್ರಗತಿಯ ಉಷ್ಣಾಂಶವು ಈಗ ಗಂಭೀರ ಚಿಂತನೆಗೆ ಆಸ್ಪದವಾಗಿದೆ.
ಇದು, ತಾಪಮಾನ ಬದಲಾವಣೆಯ ಪರಿಣಾಮ ಎಂದು ಹೇಳಿರುವ ಪರಿಸರ ಕಾರ್ಯಕರ್ತರು , ಗಿರಿಧಾಮವನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್–ಜೂನ್ ಅವಧಿಯಲ್ಲಿ ಇಲ್ಲಿಗೆ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ.
ಭಾನುವಾರ ಮತ್ತು ಸೋಮವಾರ ಇಲ್ಲಿ ದಾಖಲಾಗಿರುವ ಉಷ್ಣಾಂಶ, ಸಾಮಾನ್ಯವಾಗಿ ದಾಖಲಾಗುವ ಉಷ್ಣಾಂಶಕ್ಕಿಂತಲೂ 5.4 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ಇದು, ಗಿರಿಧಾಮದಲ್ಲಿ 1951ರಲ್ಲಿ ಹವಾಮಾನ ಕೇಂದ್ರ ಸ್ಥಾಪನೆಯಾದ ಬಳಿಕ, ದಾಖಲಾಗಿರುವ ಗರಿಷ್ಠ ಉಷ್ಣಾಂಶವೂ ಆಗಿದೆ.
ಗರಿಷ್ಠ ಪ್ರಮಾಣದ ಉಷ್ಣಾಂಶವು ಮುಂದಿನ ಕೆಲವು ದಿನ ಮುಂದುವರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಮೇ 3ರವರೆಗೂ ಉಷ್ಣಹವೆ ಬಾಧಿಸಲಿದೆ ಎಂದು ಇಲಾಖೆಯು ಎಚ್ಚರಿಕೆ ನೀಡಿದೆ.
ಊಟಿ ಒಳಗೊಂಡಿರುವ ನೀಲಗಿರಿ ಜಿಲ್ಲೆಯು ಕರ್ನಾಟಕ, ತಮಿಳುನಾಡು, ಕೇರಳದದ ಜನರಿಗೆ ಕೇವಲ ಪ್ರವಾಸಿ ಕೇಂದ್ರವಷ್ಟೇ ಅಲ್ಲ. ಸರ್ವಋತುವಿನಲ್ಲಿಯೂ ಹರಿಯುವ ಹಲವು ತೊರೆಗಳ ಉಗಮ ಸ್ಥಾನವೂ ಆಗಿದೆ.
ಅಲ್ಲದೆ, ಹಲವು ಗಿಡಮೂಲಿಕೆಗಳು, ಸಸ್ಯ ತಳಿಗಳ ನೆಲೆಯಾಗಿದೆ. ಕೇರಳದ ವಯನಾಡ್ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಲ್ಲಿ ಜಲವಿದ್ಯುತ್ ಘಟಕವು ಇದೆ. ಈ ವ್ಯಾಪ್ತಿಯಲ್ಲಿ ಹುಲಿ ಸೇರಿ ವನ್ಯಜೀವಿಗಳು ಇದ್ದು, ಮಾನವ–ಪ್ರಾಣಿ ಸಂಘರ್ಷಕ್ಕೂ ಕಾರಣವಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಹಿಂದೆ 1986ರ ಏ. 29ರಂದು ಊಟಿಯಲ್ಲಿ ಗರಿಷ್ಠ ತಾಪಮಾನ 28.5 ಡಿಗ್ರಿ ಸೆಲ್ಸಿಯಸ್, ದಾಖಲಾಗಿತ್ತು. ಈ ವರ್ಷದ ಜನವರಿ ಮೊದಲ ವಾರ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
20 ಸಾವಿರ ವಾಹನಗಳ ಪ್ರವೇಶ: ಮದ್ರಾಸ್ ಹೈಕೋರ್ಟ್ ಕಳವಳ
ಚೆನ್ನೈ: ಊಟಿ ಮತ್ತು ಕೊಡೈಕನಾಲ್‌ಗೆ ಗಿರಿಧಾಮಗಳಿಗೆ ಸಂಪರ್ಕ ಕಲ್ಪಿಸುವ ಎಂಟು ಚೆಕ್ ಪಾಯಿಂಟ್‌ಗಳ ಮೂಲಕ 11500 ಕಾರುಗಳು ಸೇರಿದಂತೆ ಸುಮಾರು 20 ಸಾವಿರ ವಾಹನಗಳು ಪ್ರವೇಶಿಸುತ್ತವೆ ಎಂಬ ಬಗ್ಗೆ ಮದ್ರಾಸ್ ಹೈಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
‘ಇನ್ನು ಮುಂದೆ ವಾಹನಗಳ ಸಮರ್ಪಕ ಅಂಕಿ ಅಂಶ ಸಂಗ್ರಹಿಸಲು ಆಗುವಂತೆ ಗಿರಿಧಾಮಗಳಿಗೆ ಪ್ರವೇಶಿಸುವ ಎಲ್ಲ ವಾಹನಗಳಿಗೆ ಇ–ಪಾಸ್ ಪಡೆಯುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಎನ್.ಸತೀಶ್ ಕುಮಾರ್ ಡಿ. ಭರತ ಚಕ್ರವರ್ತಿ ಅವರಿದ್ದ ಪೀಠವು ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.