ನವದೆಹಲಿ: ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿ, ಸಂಭ್ರಮಿಸಿದ ಸಂಸತ್ತಿನಿಂದ ಅಮಾನತುಗೊಂಡ ಸಂಸದರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಿಂದ ಅಮಾನತುಗೊಂಡ 141 ಸಂಸದರು ಸಂಸತ್ ಭವನದ ಹೊರಗೆ ಮಂಗಳವಾರ ಪ್ರತಿಭಟನೆ ನಡೆಸಿದರು. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಜಗದೀಪ್ ಅವರನ್ನು ಅಣಕಿಸಿದ್ದಾರೆ. ಅದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚಿತ್ರೀಕರಿಸಿದರೆ, ಉಳಿದ ಸಂಸದರು ಸಂಭ್ರಮಿಸಿದ್ದಾರೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ, ತನ್ನ ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷಗಳ ಸಂಸದರ ವರ್ತನೆಯನ್ನು ಖಂಡಿಸಿದೆ.
‘ಈಗ ತಿಳಿಯಿತೇ ವಿರೋಧ ಪಕ್ಷಗಳ ಸಂಸದರು ಏಕೆ ಅಮಾನತಾಗಿದ್ದಾರೆ ಎಂದು? ಈ ದೃಶ್ಯ ನೋಡಿದರೆ ಸದನದೊಳಗೆ ಇವರು ಎಷ್ಟು ಬೇಜವಾಬ್ದಾರಿಯುತವಾಗಿ ಹಾಗೂ ಕಾನೂನು ಉಲ್ಲಂಘಿಸುವವರು ಎಂಬುದು ತಿಳಿಯುತ್ತದೆ’ ಎಂದು ಹೇಳಿದೆ.
ಅಮಾನತುಗೊಂಡ ಬಳಿಕ ಸಂಸದರು ಸಂಸತ್ ಭವನದ ಮಕರ ದ್ವಾರದ ಬಳಿ ಸೇರಿದರು. ಅಲ್ಲಿ ಅಣಕು ಸಂಸತ್ ಕಲಾಪ ನಡೆಸಿದರು. ಅದರಲ್ಲಿ ಭಾಗಿಯಾಗಿದ್ದ ಕಲ್ಯಾಣ್ ಬ್ಯಾನರ್ಜಿ ಅವರು, ‘ನನ್ನ ಬೆನ್ನುಹುರಿ ನೆಟ್ಟಗಿದೆ. ಹೀಗಾಗಿ ನಾನು ಉದ್ದ ಇದ್ದೇನೆ’ ಎಂದು ಜಗದೀಪ್ ಅವರಂತೆ ನಟಿಸಿದರು ಎಂದು ಆರೋಪಿಸಲಾಗಿದೆ.
ವಿರೋಧ ಪಕ್ಷಗಳ ಸಂಸದರ ಈ ನಡೆ ಒಪ್ಪತಕ್ಕದ್ದಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅಸಮಾಧಾನ ಹೊರಹಾಕಿದ್ದಾರೆ. ಮಧ್ಯಾಹ್ನ 12ಕ್ಕೆ ರಾಜ್ಯಸಭಾ ಕಲಾಪ ಆರಂಭವಾಗುತ್ತಿದ್ದಂತೆ ಅವರು ಈ ವಿಷಯ ಪ್ರಸ್ತಾಪಿಸಿ, ವಿರೋಧ ಪಕ್ಷಗಳ ಸಂಸದರ ವರ್ತನೆಯನ್ನು ಖಂಡಿಸಿದರು.
ಇತ್ತೀಚೆಗೆ ನಡೆದ ಸಂಸತ್ ಭವನದ ಭದ್ರತಾ ಲೋಪ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡುವಂತೆ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸಂಸದರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾಧ್ಯಕ್ಷರು ಒಟ್ಟು 141 ಸಂಸದರನ್ನು ಅಮಾನತುಗೊಳಿಸಿದ್ದಾರೆ.
ಸಂಸದರ ಅಮಾನತು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಂಸತ್ ಭವನದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೂ ಆರು ಜನರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.