ನವದೆಹಲಿ(ಪಿಟಿಐ):ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಬೆಲೆ ಏರಿಕೆಯಾಗುತ್ತಿದ್ದು, ಇದು ಬಡವರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಿಸಿವೆ.
ಆದರೆ, ಆಡಳಿತರೂಢ ಬಿಜೆಪಿಯು, ‘ಇದುಜಾಗತಿಕ ಬೆಳವಣಿಗೆಯಿಂದ ಉದ್ಭವಿಸಿರುವ ಸಮಸ್ಯೆ. ಇದರ ನಿಯಂತ್ರಣ ಯಾವುದೇ ದೇಶದ ಕೈಯಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ನಡೆದ ಅಲ್ಪಾವಧಿಯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್, ಬೆಲೆ ಏರಿಕೆಯು ಎಲ್ಲರನ್ನೂ ಬಾಧಿಸಿದೆ. ಇದನ್ನು ಪರಿಹರಿಸಲು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ ಎಂದರು.
ಹಣ ದುಬ್ಬರ ಪ್ರಮಾಣ ಶೇ 7ರ ಆಸುಪಾಸಿನಲ್ಲಿದೆ. ಈ ಹಿಂದೆ ಯುಪಿಎ ಆಡಳಿತದಲ್ಲಿದ್ದಂತೆ ಎರಡಂಕಿಗೆ ತಲುಪಿಲ್ಲ. ಕೋವಿಡ್ ಸಾಂಕ್ರಾಮಿಕ, ಉಕ್ರೇನ್– ರಷ್ಯಾ ಯುದ್ಧವು ಆಹಾರ ವಸ್ತುಗಳು, ಇಂಧನ ಆಮದು–ರಫ್ತು ಸರಪಳಿಯ ಕೊಂಡಿ ತಪ್ಪಿಸಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮಸ್ಯೆ ನಮ್ಮಲ್ಲಷ್ಟೇ ಅಲ್ಲ, ಎಲ್ಲ ದೇಶಗಳಲ್ಲೂ ತಲೆದೋರಿದೆ ಎಂದು ಜಾವಡೇಕರ್ ಹೇಳಿದರು.
ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಯಿಲ್, ಟಿಎಂಸಿ ನಾಯಕ ಡೆರಿಕ್ ಒಬ್ರಿಯಾನ್,ಸಿಪಿಐಎಂನ ಎಲಾಮರಾಮ್ ಕರೀಮ್ ಅವರು, ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರದಲ್ಲಿ ಸೆಸ್ ಮತ್ತು ಸರ್ಚಾರ್ಜ್ ಶೇ 10ರಿಂದ ಶೇ 20ಕ್ಕೆ ಏರಿಕೆಯಾಗಿದೆ. ಶೇ 29ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸಿದ್ದಾರೆ ಎಂದು ದನಿ ಎತ್ತಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.