ADVERTISEMENT

ದೇಶವನ್ನು ಮತ್ತೆ ದಾಸ್ಯಕ್ಕೆ ತಳ್ಳಲು ‘ಇಂಡಿಯಾ’ ಯತ್ನ: ನರೇಂದ್ರ ಮೋದಿ ವಾಗ್ದಾಳಿ

ಪಿಟಿಐ
Published 14 ಸೆಪ್ಟೆಂಬರ್ 2023, 9:28 IST
Last Updated 14 ಸೆಪ್ಟೆಂಬರ್ 2023, 9:28 IST
<div class="paragraphs"><p>ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೀನಾ ರಿಫೈನರಿಯಲ್ಲಿ ಗುರುವಾರ ಪೆಟ್ರೋಕೆಮಿಕಲ್ಸ್‌ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು </p><p></p></div>

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೀನಾ ರಿಫೈನರಿಯಲ್ಲಿ ಗುರುವಾರ ಪೆಟ್ರೋಕೆಮಿಕಲ್ಸ್‌ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು

   

–ಪಿಟಿಐ ಚಿತ್ರ

ADVERTISEMENT

ಬೀನಾ (ಮಧ್ಯಪ್ರದೇಶ): ವಿಪಕ್ಷಗಳ ಮೈತ್ರಿಕೂಟವನ್ನು ‘ಘಮಂಡಿಯಾ’ ಕೂಟ ಎಂದು ಮತ್ತೊಮ್ಮೆ ಜರಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಸನಾತನ ಧರ್ಮವನ್ನು ನಾಶ ಮಾಡಿ, ದೇಶವನ್ನು ಸಾವಿರಾರು ವರ್ಷಗಳ ಗುಲಾಮಗಿರಿಗೆ ನೂಕಲು ‘ಇಂಡಿಯಾ’ ಹವಣಿಸುತ್ತಿದೆ’ ಎಂದು ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ, ಅಹಲ್ಯಾಬಾಯಿ ಹೋಳ್ಕರ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಹೆಸರು ಪ್ರಸ್ತಾಪಿಸಿದ ಮೋದಿ, ‘ಈ ಎಲ್ಲ ಮಹಾನ್‌ ವ್ಯಕ್ತಿಗಳು ಕೂಡ ಸನಾತನ ಧರ್ಮದಿಂದ ಪ್ರೇರಣೆ ಪಡೆದಿದ್ದರು’ ಎಂದು ಹೇಳಿದ್ದಾರೆ.

‘ಮುಂಬೈನಲ್ಲಿ ಸಭೆ ಸೇರಿದ್ದ ‘ಇಂಡಿಯಾ’ ಮೈತ್ರಿಕೂಟಕ್ಕೆ ಯಾವುದೇ ನೀತಿಗಳು, ವಿಷಯಗಳು ಅಥವಾ ನಾಯಕ ಇರಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದೇ ಅದರ ರಹಸ್ಯ ಕಾರ್ಯಸೂಚಿಯಾಗಿದೆ’ ಎಂದು ಹೇಳಿದ್ದಾರೆ.

ಸಾಗರ್ ಜಿಲ್ಲೆಯ ಬೀನಾದಲ್ಲಿರುವ ರಿಫೈನರಿಯಲ್ಲಿ ಪೆಟ್ರೊಕೆಮಿಕಲ್ಸ್ ಸಂಕೀರ್ಣ ಹಾಗೂ ಇತರ ಹತ್ತು ಉದ್ಯಮಗಳು ಸೇರಿದಂತೆ ₹ 49 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧಿ ಅವರು ಸನಾತನ ಧರ್ಮದಿಂದಲೇ ಸ್ಫೂರ್ತಿ ಪಡೆದಿದ್ದರು. ಅವರು ಕೈಗೊಂಡಿದ್ದ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು ಕೂಡ ಸನಾತನ ಧರ್ಮವೇ ಆಗಿತ್ತು. ಅವರು ತಮ್ಮ ಬದುಕಿನುದ್ದಕ್ಕೂ ಸನಾತನ ಧರ್ಮವನ್ನೇ ಪಾಲಿಸುತ್ತಿದ್ದರು. ಅವರು ಹೇಳಿದ ಕೊನೆಯ ಪದ ಕೂಡ ‘ಹೇ ರಾಮ್‌’ ಆಗಿತ್ತು’ ಎನ್ನುವ ಮೂಲಕ ಮೋದಿ ಅವರು ಸನಾತನ ಧರ್ಮ ಟೀಕಿಸಿದವರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಹರಿತಗೊಳಿಸಿದರು.

‘ವಿರೋಧ ಪಕ್ಷಗಳ ನಾಯಕರು ಸನಾತನ ಧರ್ಮದ ವಿರುದ್ಧ ಬಹಿರಂಗವಾಗಿಯೇ ಮಾತನಾಡಲು ಆರಂಭಿಸಿದ್ದು, ನಮ್ಮ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ. ಹೀಗಾಗಿ, ದೇಶದೆಲ್ಲೆಡೆ ಇರುವ ಸನಾತನ ಧರ್ಮ ಪಾಲಿಸುವ ವ್ಯಕ್ತಿಗಳು ಹಾಗೂ ದೇಶವನ್ನು ಪ್ರೀತಿಸುವವರು ಈ ಬಗ್ಗೆ ಜಾಗೃತರಾಗಿರಬೇಕು’ ಎಂದು ಮೋದಿ ಹೇಳಿದರು.

ವಾಗ್ದಾಳಿ ಈಗ ತೀವ್ರ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಡಿ.ರಾಜಾ ಅವರು ಸನಾತನ ಧರ್ಮ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಂದ ಸೃಷ್ಟಿಯಾಗಿರುವ ವಿವಾದದ ಕುರಿತು ಮೋದಿ ಅವರು ಇದೇ ಮೊದಲ ಬಾರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಇಂಡಿಯಾ’ ಗುರಿಯಾಗಿಸಿ ಈ ಟೀಕಾಪ್ರಹಾರ ನಡೆಸಿದ್ದಾರೆ.

ಭಾರತವು ಜಿ20 ಶೃಂಗಸಭೆಯ ಆತಿಥ್ಯ ವಹಿಸಿದ್ದ ಕಾರಣಕ್ಕಾಗಿ, ಈ ವಿವಾದ ಕುರಿತು ಪ್ರಾರಂಭದಲ್ಲಿ ಬಿಜೆಪಿ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗಿರಲಿಲ್ಲ. ಈಗ, ಈ ವಿಚಾರವನ್ನು ಮುಂದಿಟ್ಟುಕೊಂಡು ಪಕ್ಷವು ವಾಗ್ದಾಳಿಯನ್ನು ತೀವ್ರಗೊಳಿಸಿದೆ.

ಜಿ20 ಶೃಂಗಸಭೆಗೂ ಮುನ್ನ ಮಂತ್ರಿಗಳ ಪರಿಷತ್ತಿನ ಸಭೆ ನಡೆಸಿದ್ದ ಮೋದಿ, ಸನಾತನ ಧರ್ಮ ಕುರಿತ ವಿಚಾರವಾಗಿ ‘ಸೂಕ್ತ ಉತ್ತರ’ ನೀಡುವಂತೆ ಸಚಿವರಿಗೆ ಹೇಳಿದ್ದರು.

‘ಜಿ20 ಯಶಸ್ಸಿನ ಶ್ರೇಯ ಜನರಿಗೆ ಸೇರಿದ್ದು’: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯನ್ನು ಪ್ರಸ್ತಾಪಿಸಿದ ಮೋದಿ, ‘ಈ ಶೃಂಗಸಭೆಯ ಯಶಸ್ಸಿನ ಶ್ರೇಯ ಮೋದಿಗೆ ಸೇರದು, ಬದಲಾಗಿ ದೇಶದ 140 ಕೋಟಿ ಜನರಿಗೆ ಸಲ್ಲುತ್ತದೆ. ಈ ಯಶಸ್ಸಿನಿಂದಾಗಿ ದೇಶದ ಜನರು ಹೆಮ್ಮೆಯಿಂದ ಬೀಗುತ್ತಿದ್ದಾರೆ’ ಎಂದು ಪ್ರಧಾನಿ ಹೇಳಿದರು.

‘ವಿಜಯ ಶಂಖನಾದ’ ರ‍್ಯಾಲಿ: ಛತ್ತೀಸಗಢದ ರಾಯಗಡ ಜಿಲ್ಲೆಯ ಕೊಂಡಾತರಾಯಿ ಗ್ರಾಮದಲ್ಲಿ ಗುರುವಾರ ನಡೆದ ‘ವಿಜಯ ಶಂಖನಾದ’ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಸನಾತನ ಧರ್ಮ, ಭಾರತ ಹಾಗೂ ಸಾವಿರಾರು ವರ್ಷಗಳ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಹುನ್ನಾರ ನಡೆಸುತ್ತಿದೆ’ ಎಂದು ಟೀಕಿಸಿದರು.

ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ ಅವರು, ‘ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಂದಿದ್ದರೆ, ಬಡವರ ಕಲ್ಯಾಣದಲ್ಲಿ ಹಿಂದಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.