ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ 'ಮೌನ ವ್ರತ' ಮುರಿಯಲು ವಿಪಕ್ಷಗಳ ಒಕ್ಕೂಟಕ್ಕೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲೇಬೇಕಾದ ಅನಿವಾರ್ಯ ಎದುರಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಮಂಗಳವಾರ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಗೊಗೊಯಿ, 'ಒನ್ ಇಂಡಿಯಾ' ಎಂದು ಹೇಳುವ ಸರ್ಕಾರವು ಇಂದು ಎರಡು ಮಣಿಪುರವನ್ನು ಸೃಷ್ಟಿಸಿದೆ. ಒಂದು ಬೆಟ್ಟದಲ್ಲಿ ಮತ್ತೊಂದು ಕಣಿವೆಯಲ್ಲಿ ವಾಸಿಸುತ್ತದೆ ಎಂದು ಆರೋಪಿಸಿದರು.
ಸಂಸತ್ತಿನಲ್ಲಿ ಇದು ಸಂಖ್ಯಾಬಲದ ವಿಷಯವಲ್ಲ. ಬದಲಾಗಿ ಮಣಿಪುರದ ಜನರಿಗೆ ನ್ಯಾಯ ದೊರಕಬೇಕಿದೆ. ಇದರಿಂದಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದು ಅನಿವಾರ್ಯವೆನಿಸಿತು ಎಂದು ಹೇಳಿದರು.
ಮಣಿಪುರಕ್ಕೆ ನ್ಯಾಯ ಸಿಗಬೇಕಿದೆ. ಮಣಿಪುರ ಹೊತ್ತಿ ಉರಿದರೆ, ಇಡೀ ದೇಶವೇ ಉರಿಯುತ್ತದೆ. ಮಣಿಪುರ ಒಡೆದರೆ ದೇಶವೇ ಇಬ್ಭಾಗವಾಗುತ್ತದೆ. ದೇಶದ ನಾಯಕರಾಗಿ ಪ್ರಧಾನಿ ಮೋದಿ, ಸದನಕ್ಕೆ ಬಂದು ಮಾತನಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅವರು ಮೌನ ವ್ರತವನ್ನು ಪಾಲಿಸಿದರು ಎಂದು ವಾಗ್ದಾಳಿ ನಡೆಸಿದರು.
ಅವಿಶ್ವಾಸ ನಿರ್ಣಯ ಮಂಡನೆಯ ಮೂಲಕ ಪ್ರಧಾನಿ ಮೌನ ವ್ರತ ಮುರಿಯುವುದು ನಮ್ಮ ಇರಾದೆಯಾಗಿತ್ತು ಎಂದು ತಿಳಿಸಿದರು.
ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಈಶಾನ್ಯ ರಾಜ್ಯದ ಬಗ್ಗೆ ಮಾತನಾಡಲು ಪ್ರಧಾನಿಗೆ ಸುಮಾರು 80 ದಿನಗಳು ಬೇಕಾಯಿತು. ಆದರೆ ಕೇವಲ 30 ಸೆಕೆಂಡು ಮಾತ್ರ ವಿಷಯವನ್ನು ಪ್ರಸ್ತಾಪಿಸಿದರು. ಆ ಬಳಿಕ ಮಣಿಪುರದಲ್ಲಿ ಶಾಂತಿ ನೆಲೆಸಲು ಮನವಿ ಮಾಡಿಲ್ಲ. ಸಚಿವರು ಪ್ರತಿಕ್ರಿಯಿಸುತ್ತೇವೆ ಎಂದಷ್ಟೇ ಹೇಳುತ್ತಾರೆ. ಆದರೆ ಪ್ರಧಾನಿಯ ಮಾತಿಗೂ ಸಚಿವರ ಮಾತಿಗೂ ವ್ಯತ್ಯಾಸವಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.