ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯಲ್ಲಿನ ವಿರೋಧ ಪಕ್ಷಗಳ ಸಂಸದರು ಮಂಗಳವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಅವರ ‘ಏಕಪಕ್ಷೀಯ’ ನಿರ್ಧಾರಗಳನ್ನು ಖಂಡಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗದಿದ್ದರೆ ಸಮಿತಿಯಿಂದ ಹೊರಬರುವ ಸೂಚನೆಯನ್ನು ಈ ಮೂಲಕ ನೀಡಿದ್ದಾರೆ.
ಸಮಿತಿಯ ಕಲಾಪದಲ್ಲಿ ತಮ್ಮ ಧ್ವನಿಯನ್ನು ಅಡಗಿಸಲಾಗಿದೆ ಎಂದು ಪ್ರತಿಪಾದಿಸಿದ ಸಂಸದರು, ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಪ್ರಸ್ತಾವಿತ ಕಾನೂನಿನ ವಿರುದ್ಧದ ತಮ್ಮ ಆಕ್ಷೇಪಣೆಗಳ ಪಟ್ಟಿ ಮಾಡಿದ್ದಾರೆ.
ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಮತ್ತು ಇಮ್ರಾನ್ ಮಸೂದ್, ಡಿಎಂಕೆಯ ರಾಜಾ, ಎಐಎಂಐಎಂನ ಅಸಾದುದ್ದೀನ್ ಒವೈಸಿ, ಎಎಪಿಯ ಸಂಜಯ್ ಸಿಂಗ್ ಮತ್ತು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಸೇರಿ ಹಲವು ಸಂಸದರು ಸಹಿ ಮಾಡಿ ಜಂಟಿ ಪತ್ರವನ್ನು ಸಿದ್ಧಪಡಿಸಿದ್ದಾರೆ. ಈ ಪತ್ರವನ್ನು ಮಂಗಳವಾರ ಸ್ಪೀಕರ್‌ಗೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಸಂಸದ ಪಾಲ್ ಅವರು ಸಮಿತಿಯ ಸಭೆಗಳ ದಿನಾಂಕ ನಿಗದಿಪಡಿಸುವಲ್ಲಿ ಮತ್ತು ಸಭೆಗೆ ಯಾರನ್ನು ಆಹ್ವಾನಿಸಬೇಕು ಎನ್ನುವ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕೆಲವೊಮ್ಮೆ ಸತತ ಮೂರು ದಿನಗಳವರೆಗೆ ಸಭೆ ನಿಗದಿ ಮಾಡಿರುವ ನಿದರ್ಶನಗಳಿವೆ. ಅಲ್ಲದೆ, ಸಂಸದರಿಗೆ ಸಾಕಷ್ಟು ಸಿದ್ಧತೆಯೊಂದಿಗೆ ಅಭಿಪ್ರಾಯ ಮಂಡಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದಂತಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾಗಿ ಮೂಲಗಳು ಹೇಳಿವೆ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಿತಿಯ ಸದಸ್ಯರೊಂದಿಗೆ ಔಪಚಾರಿಕ ಸಮಾಲೋಚನೆ ನಡೆಸುವಂತೆ ಪಾಲ್ ಅವರಿಗೆ ನಿರ್ದೇಶಿಸುವಂತೆ ವಿರೋಧ ಪಕ್ಷದ ಸಂಸದರು ಬಿರ್ಲಾ ಅವರನ್ನು ಒತ್ತಾಯಿಸಲಿದ್ದಾರೆ.
‘ನಮ್ಮ ಅಭಿಪ್ರಾಯಗಳನ್ನು ಸಮಿತಿ ಸಭೆಯಲ್ಲಿ ಆಲಿಸದಿದ್ದರೆ ನಾವು ಸಮಿತಿಯಿಂದ ಹೊರಬರಬೇಕಾಗಬಹುದು ಎನ್ನುವುದನ್ನು ವಿನಮ್ರತೆಯಿಂದ ತಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಪಕ್ಷದ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಿಲ್ಲ ಎಂಬ ಆರೋಪವನ್ನು ಜಗದಂಬಿಕಾ ಪಾಲ್ ತಳ್ಳಿಹಾಕಿದ್ದು, ಪ್ರತಿಯೊಬ್ಬರ ಅಭಿಪ್ರಾಯವನ್ನು ಖಂಡಿತವಾಗಿಯೂ ಆಲಿಸಿದ್ದೇನೆ ಎಂದಿದ್ದಾರೆ.
ಜಮಾತ್-ಎ-ಇಸ್ಲಾಮಿ ಹಿಂದ್ ಸೇರಿ ಹಲವಾರು ಮುಸ್ಲಿಂ ಸಂಘಟನೆಗಳು ಮಸೂದೆಯ ಬಗ್ಗೆ ಅಭಿಪ್ರಾಯ ತಿಳಿಸಲು ಸೋಮವಾರ ಸಮಿತಿಯ ಮುಂದೆ ಹಾಜರಾದವು.
ಜಮಾತ್–ಎ– ಇಸ್ಲಾಮಿ ಹಿಂದ್ ತಿದ್ದುಪಡಿಗಳನ್ನು ವಿರೋಧಿಸಿದರೆ, ಶಾಲಿನಿ ಅಲಿ ನೇತೃತ್ವದ ಮುಸ್ಲಿಂ ವುಮೆನ್ ಇಂಟಲೆಕ್ಚುವಲ್ ಗ್ರೂಪ್ ಮತ್ತು ಫೈಜ್ ಅಹ್ಮದ್ ಫೈಜ್ ನೇತೃತ್ವದ ವಿಶ್ವ ಶಾಂತಿ ಪರಿಷತ್ತು ಸೇರಿ ಹಲವು ಸಂಘಟನೆಗಳು ತಿದ್ದುಪಡಿಗಳನ್ನು ಬೆಂಬಲಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.