ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಮಂಗಳವಾರವೂ ವಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 12.30ಕ್ಕೆ ಮತ್ತು ರಾಜ್ಯಸಭೆ ಕಲಾಪವನ್ನು 2 ಗಂಟೆಗೆ ಮುಂದೂಡಲಾಗಿದೆ.
ಈ ಮಧ್ಯೆ, ಸಂಸದರ ಅಮಾನತು ಖಂಡಿಸಿ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂಡಿಯಾ ಬಣದ ಸದಸ್ಯರು ಪ್ರತಿಭಟನೆ ನಡೆಸಿದರು.
ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಉಭಯ ಸದನಗಳಲ್ಲಿ ಬಲವಾಗಿ ಒತ್ತಾಯಿಸಲು ವಿರೋಧ ಪಕ್ಷಗಳ ಇಂಡಿಯಾ ಬಣ ನಿರ್ಧರಿಸಿತ್ತು..
ಬೆಳಿಗ್ಸೆ ಸಂಸತ್ತಿನ ಸಂಕೀರ್ಣದಲ್ಲಿ ನಡೆದ ಮೈತ್ರಿಕೂಟದ ಘಟಕಗಳ ಸಭೆಯಲ್ಲಿ ಇದನ್ನು ನಿರ್ಧರಿಸಲಾಗಿತ್ತು. ಅಮಿತ್ ಶಾ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಉಭಯ ಸದನಗಳಿಂದ 78 ಸದಸ್ಯರನ್ನು ಸೋಮವಾರ ಅಮಾನತುಗೊಳಿಸಲಾಗಿತ್ತು.
ಸೋಮವಾರ ಅಮಾನತುಗೊಂಡವರೂ ಸೇರಿ ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.
ಇದರಿಂದಾಗಿ ಇಂಡಿಯಾ ಬಣವು ರಾಜ್ಯಸಭೆಯಲ್ಲಿ ಅರ್ಧದಷ್ಟು ಸದಸ್ಯರನ್ನು ಕಳೆದುಕೊಂಡರೆ, ಲೋಕಸಭೆಯಲ್ಲಿ ಮೂರನೇ ಒಂದರಷ್ಟು ಸದಸ್ಯರನ್ನು ಕಳೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.