ADVERTISEMENT

ಕೇಂದ್ರದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು: ಪ್ರಯತ್ನಕ್ಕೆ ವೇಗ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 13:40 IST
Last Updated 23 ಏಪ್ರಿಲ್ 2023, 13:40 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಹೋರಾಡಲು ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟ ರಚಿಸಬೇಕು ಎಂಬ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಈಗ ವೇಗ ಸಿಕ್ಕಿದೆ.

ಆಮ್‌ ಆದ್ಮಿ ಪಕ್ಷವು (ಎಎಪಿ) ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದೆ. ಇನ್ನೊಂದೆಡೆ, ವಿರೋಧ ಪಕ್ಷಗಳ ಪಾಳೆಯದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರ ವರ್ಚಸ್ಸು ಹೆಚ್ಚುತ್ತಿದೆ. ಈ ಎರಡು ಬೆಳವಣಿಗೆಗಳು ವಿರೋಧ ಪಕ್ಷಗಳ ಒಗ್ಗಟ್ಟು ಸಾಧಿಸುವ ಪ್ರಯತ್ನಗಳಿಗೆ ವೇಗ ಸಿಕ್ಕಿದೆ ಎಂಬುದರ ಸಂಕೇತಗಳಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಲ ವಿರೋಧ ಪಕ್ಷಗಳ ಮುಖಂಡರು ಆಗಾಗ ಭೇಟಿ ಮಾಡಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸಮಾಲೋಚನೆ ನಡೆಸುತ್ತಿದ್ದರು. ಕೆಲ ವಿಷಯಗಳಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದು ವಿರೋಧ ಪಕ್ಷಗಳು ನಾಯಕರು ಸಮ್ಮತಿಸಿರುವುದು ಗಮನಾರ್ಹ.

ADVERTISEMENT

ಅದರಲ್ಲೂ, ಮುಂದಿನ ತಿಂಗಳು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ, ದೆಹಲಿಯಲ್ಲಿ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ವಿರೋಧ ಪಕ್ಷಗಳು ಚಿಂತನೆ ನಡೆಸಿವೆ.

ಕರ್ನಾಟಕ ವಿದಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಉಮೇದಿನಲ್ಲಿ ಕಾಂಗ್ರೆಸ್‌ ಇದೆ. ಒಂದು ವೇಳೆ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಸೋಲಿಸಿದಲ್ಲಿ ಅದು ವಿಪಕ್ಷಗಳ ಒಗ್ಗಟ್ಟು ಸಾಧಿಸುವ ಪ್ರಯತ್ನಕ್ಕೆ ಭಾರಿ ಬಲ ತರಲಿದೆ ಎಂಬ ಲೆಕ್ಕಾಚಾರ ವಿಪಕ್ಷಗಳಲ್ಲಿದೆ. ಅಲ್ಲದೇ, ಇದರಿಂದ ವಿರೋಧ ಪಕ್ಷಗಳ ಮೈತ್ರಿಕೂಟ ಸೇರುವ ಬಗ್ಗೆ ಟಿಎಂಸಿ ವಿಚಾರ ಮಾಡಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ಸಂಸತ್‌ನಲ್ಲಿ ವಿರೋಧ ಪಕ್ಷಗಳ ಸದನ ನಾಯಕರು ಮಾರ್ಚ್‌ನಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ವಿಪಕ್ಷಗಳನ್ನು ಒಂದಗೂಡಿಸುವ ಕಾರ್ಯಕ್ಕೆ ವೇಗ ನೀಡುವ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿತ್ತು. ಆ ಬೆನ್ನಲ್ಲೇ, ಕಾರ್ಯಪ್ರವೃತ್ತರಾದ ಖರ್ಗೆ ಸ್ಟಾಲಿನ್‌, ಉದ್ಧವ್‌ ಠಾಕ್ರೆ, ನಿತೀಶ್‌ ಕುಮಾರ್‌ ಅವರೊಂದಿಗೆ ಏಪ್ರಿಲ್‌ 7ರಂದು ಮಾತುಕತೆ ನಡೆಸಿ, ಒಗ್ಗಟ್ಟು ಸಾಧಿಸುವ ಪ್ರಯತ್ನಕ್ಕೆ ನಾಂದಿ ಹಾಡಿದರು.

ಆದರೆ, ವಿರೋಧ ಪಕ್ಷಗಳ ಮೈತ್ರಿಕೂಟದ ನೇತೃತ್ವ ಯಾರಿಗೆ ವಹಿಸಬೇಕು ಎಂಬ ಬಗ್ಗೆ ವಿಪಕ್ಷಗಳ ನಾಯಕರಲ್ಲಿ ಒಮ್ಮತವಿಲ್ಲ. ಇದು ಈ ನಿಟ್ಟಿನಲ್ಲಿನ ಪ್ರಯತ್ನಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂಬ ಸಣ್ಣ ಆತಂಕ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.

ಆದರೆ, ಬೇರೆ ಪಕ್ಷಗಳಿಗೆ ನಾಯಕತ್ವ ಬಿಟ್ಟುಕೊಡಲು ಖರ್ಗೆ ಸಹಮತ ವ್ಯಕ್ತಪಡಿಸಿರುವುದರಿಂದ ಕಾಂಗ್ರೆಸ್‌ ನಾಯಕತ್ವಕ್ಕಾಗಿ ಹಕ್ಕು ಸ್ಥಾಪಿಸುವುದಿಲ್ಲ ಎನ್ನಲಾಗುತ್ತಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ವಿಪಕ್ಷಗಳ ಮೈತ್ರಿಕೂಟ ಸಂಚಾಲಕರಾಗಬಹುದು ಎಂಬ ಚರ್ಚೆ ಇದೆ. ಆದರೆ, ಕಾಂಗ್ರೆಸ್‌ ನಾಯಕರನ್ನು ಎನ್‌ಸಿಪಿ ವರಿಷ್ಠ ಶರದ್ ಪವಾರ್‌ ದಿಢೀರ್‌ ಭೇಟಿ ಮಾಡಿದ್ದು ನಿತೀಶ್‌ ಕುಮಾರ್‌ ಪ್ರಯತ್ನಕ್ಕೆ ತಡೆವೊಡ್ಡಲಿದೆ ಎಂಬ ಚರ್ಚೆಗಳೂ ನಡೆದಿವೆ.

ನಾಯಕತ್ವವನ್ನು ಕಾಂಗ್ರೆಸ್‌ ವಹಿಸಿಕೊಳ್ಳಬೇಕು ಎಂಬುದು ಪವಾರ್ ನಿಲುವಾಗಿದ್ದರೆ, 1989 ಅಥವಾ 1996ರಲ್ಲಿ ರಚಿಸಿದ್ದಂತೆ, ಕಾಂಗ್ರೆಸ್‌ ಹೊರತಾದ ಮೈತ್ರಿಕೂಟದ ಬಗ್ಗೆ ನಿತೀಶ್‌ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಎಎಪಿಯ ಅರವಿಂದ ಕೇಜ್ರಿವಾಲ್‌ ಹೆಸರೂ ಕೇಳಿಬಂದಿತ್ತಾದರೂ, ದೆಹಲಿ ಅಬಕಾರಿ ನೀತಿ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ಅವರನ್ನು ವಿಚಾರಣೆಗೆ ಒಳಪಡಿಸುತ್ತಿವೆ.

ಸಿಬಿಐ ಸಮನ್ಸ್‌ ನೀಡಿದ್ದ ಬೆನ್ನಲ್ಲೇ, ಖರ್ಗೆ ಅವರು ಕೇಜ್ರಿವಾಲ್‌ ಅವರೊಂದಿಗೆ ಮಾತನಾಡಿ, ಬೆಂಬಲ ಸೂಚಿಸಿದ್ದರು. ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ಅದೇ ಕಾರಣಕ್ಕೆ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೇಜ್ರಿವಾಲ್‌ ಬೆಂಬಲ ಸೂಚಿಸಿದ್ದರು.

ಇನ್ನೊಂದೆಡೆ, ಕೇಜ್ರಿವಾಲ್‌ ಅವರು ಕರ್ನಾಟಕದಲ್ಲಿ 210 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. 

ಸ್ಟಾಲಿನ್‌ನತ್ತ ಎಲ್ಲರ ಚಿತ್ತ...

ವಿರೋಧ ಪಕ್ಷಗಳ ಒಗ್ಗಟ್ಟು ಸಾಧಿಸುವ ಪ್ರಯತ್ನದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ಮಾತುಗಳು ವಿಪಕ್ಷಗಳ ಪಾಳೆಯದಲ್ಲಿಯೇ ಕೇಳಿಬರುತ್ತಿವೆ. ಸ್ಟಾಲಿನ್‌ ಅವರು ಕಾಂಗ್ರೆಸ್‌ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮುಂದಿನ ಚುನಾವಣೆಯನ್ನು ಮೋದಿ ವಿರುದ್ಧ ರಾಹುಲ್‌ ಎಂಬ ನೆಲೆಯಲ್ಲಿ ಮಾಡುವುದಕ್ಕೆ ಸ್ಟಾಲಿನ್‌ ತಡೆ ಒಡ್ಡುವರು. ಮುಂದಿನ ಚುನಾವಣೆಯನ್ನು ಸಾಮಾಜಿಕ ನ್ಯಾಯ ಮತ್ತು ಜಾತಿ ಗಣತಿ ಎಂಬ ವಿಷಯಗಳ ಮೇಲೆ ಎದುರಿಸಬೇಕು ಎಂಬುದು ಸ್ಟಾಲಿನ್‌ ಪ್ರತಿಪಾದನೆ. ವಿಪಕ್ಷಗಳ ನಾಯಕರು ಈ ಅಂಶವನ್ನೇ ಪ್ರಧಾನವಾಗಿರಿಸಿಕೊಂಡು ಕೇಂದ್ರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ ‘ಸ್ಟಾಲಿನ್‌ ಅವರಿಗೆ ಪ್ರಧಾನಿ ಆಗಬೇಕು ಎಂಬ ಮಹತ್ವಾಕಾಂಕ್ಷೆ ಇರಲಿಕ್ಕಿಲ್ಲ. ಆದರೆ ಅವರು ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸುವರು’ ಎಂದು ವಿರೋಧ ಪಕ್ಷವೊಂದರ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.