ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಕಾರಿಗೆ ಹತ್ತಲು ಬಿಡದೆ ಸ್ವಲ್ಪ ದೂರ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನರಿಗೆ ಕೈ ಬೀಸಿ ಕಾರನ್ನು ಏರಲು ಭೂಪೇಂದ್ರ ಪಟೇಲ್ ಪ್ರಯತ್ನಿಸಿದ್ದಾರೆ. ಈ ಸಂದರ್ಭ ಸಿಬ್ಬಂದಿ ಕಾರಿನ ಡೋರ್ ತೆಗೆದು ಪಟೇಲ್ ಅವರನ್ನು ಹತ್ತಿಸಲು ಮುಂದಾಗಿದ್ದಾರೆ. ಆದರೆ ಕಾರನ್ನು ನಿಲ್ಲಿಸದೆ ಮುಂದಕ್ಕೆ ಕೊಂಡೊಯ್ಯಲಾಗಿದೆ. ಚಲಿಸುವ ಕಾರಿನ ಜೊತೆಗೆ ಪಟೇಲ್ ಅವರು ಸ್ವಲ್ಪ ದೂರ ವೇಗವಾಗಿ ನಡೆದು ಹೋಗುತ್ತಿರುವುದು ವಿಡಿಯೊದಲ್ಲಿದೆ.
'ಗುಜರಾತ್ ಮುಖ್ಯಮಂತ್ರಿ ಹೆಸರು ನೆನಪಾಗುತ್ತಿಲ್ಲವೇ? ಗೂಗಲ್ ಮಾಡಿ ನೋಡಿ. ಗೂಗಲ್ ಸಿಎಂ ಹೆಸರನ್ನು ಹೇಳುತ್ತದೆ. ಅವರೇ ಈ ವಿಡಿಯೊದಲ್ಲಿ ಕಾರಿನೊಳಗೆ ಕೂರಲು ಪ್ರಯತ್ನಿಸುತ್ತಿರುವುದು. ಗಾಡಿ ಯಾರದ್ದು? ನಿಮಗೆ ತಿಳಿದಿದೆಯೇ?' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
'ಭೂಪೇಂದ್ರ ಪಟೇಲ್ ಅವರಿಗೆ ಅಗೌರವ ತೋರುತ್ತಿರುವುದು ಯಾರು? ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಹೀಗೆ ನಡೆಸಿಕೊಳ್ಳುತ್ತಿರುವುದು ಖಂಡನೀಯ. ಇದು ಮುಖ್ಯಮಂತ್ರಿ ಹುದ್ದೆಗೆ ಮತ್ತು ಗುಜರಾತಿನ ಜನತೆಗೆ ಮಾಡಿದ ಅವಮಾನ. ಒಬ್ಬ ಮುಖ್ಯಮಂತ್ರಿಯನ್ನೇ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದಾದರೆ ರಾಜ್ಯದ ಸಾಮಾನ್ಯ ಪ್ರಜೆಯ ಪಾಡೇನು? ದಯವಿಟ್ಟು ಉತ್ತರಿಸಿ' ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಟಿಆರ್‌ಎಸ್ ಮುಖಂಡ ವೈ. ಸತೀಶ್ ರೆಡ್ಡಿ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರಿಂದ ಚುನಾಯಿತ ಮುಖ್ಯಮಂತ್ರಿಗಳೇ ಇಂತಹ ಉಪಚಾರ ಎದುರಿಸಬೇಕಾಗುತ್ತದೆ ಎಂದರೆ ಸಾಮಾನ್ಯ ಮನುಷ್ಯನ ಪರಿಸ್ಥಿತಿಯನ್ನು ಊಹಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.