ADVERTISEMENT

ರಾಷ್ಟ್ರಲಾಂಛನ ಸ್ವರೂಪವೇ ಬದಲು, ತೀವ್ರ ಆಕ್ಷೇಪ

ಪ್ರಧಾನಿ ಅನಾವರಣ ಮಾಡಿದ್ದ ಅಶೋಕ ಸ್ತಂಭದ ಸಿಂಹಗಳ ಮುಖವಿದ್ದ ರಾಷ್ಟ್ರೀಯ ಲಾಂಛನ

ಪಿಟಿಐ
Published 12 ಜುಲೈ 2022, 14:36 IST
Last Updated 12 ಜುಲೈ 2022, 14:36 IST
ಹಳೆಯ ಮತ್ತು ಪ್ರಧಾನಿ ಅನಾವರಣ ಮಾಡಿರುವ ಲಾಂಛನ
ಹಳೆಯ ಮತ್ತು ಪ್ರಧಾನಿ ಅನಾವರಣ ಮಾಡಿರುವ ಲಾಂಛನ   

ನವದೆಹಲಿ: ಸಂಸತ್ತಿನ ನಿರ್ಮಾಣ ಹಂತದಲ್ಲಿನ ನೂತನ ಸಂಕೀರ್ಣದ ಬಳಿ ಪ್ರಧಾನಿ ಮೋದಿ ಸೋಮವಾರ ಅನಾವರಣಗೊಳಿಸಿದ, ಅಶೋಕಸ್ತಂಭದ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ ‘ಸ್ವರೂಪ’ ಈಗ ವಿವಾದಕ್ಕೆ ಆಸ್ಪದವಾಗಿದೆ.

ಈಗಿರುವಂತೆ ‘ಹಿತಭಾವ, ಘನತೆ, ಆತ್ಮವಿಶ್ವಾಸದ ಪ್ರತೀಕವಾಗಿದ್ದ’ ಸಿಂಹಗಳ ಮುಖಭಾವಕ್ಕೆ ಬದಲಾಗಿ, ‘ಕೇಡುಂಟು ಮಾಡುವ, ಆಕ್ರಮಣ ಶೈಲಿ’ಯ ಮುಖಭಾವ ಇರುವಂತೆ ಲಾಂಛನವಿದೆ ಎಂದು ಪ್ರತಿಪಕ್ಷಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

‘ನರೇಂದ್ರ ಮೋದಿಯವರೇ, ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖಭಾವವನ್ನು ಗಮನಿಸಿ. ಇದು, ಸಾರಾನಾಥ್‌ ಸಂಗ್ರಹಾಲಯದ ಪ್ರತಿಮೆ (ಬುದ್ಧನ ಪ್ರತಿಮೆ) ಮುಖಭಾವ ಬಿಂಬಿಸುವುದೋ ಅಥವಾ ಗಿರ್ ಅರಣ್ಯದಲ್ಲಿನ ಸಿಂಹದ ಮುಖಭಾವವನ್ನೋ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

‘ದಯವಿಟ್ಟು ಒಮ್ಮೆ ಗಮನಿಸಿ. ಸಾಧ್ಯವಿದ್ದರೆ ಸರಿಪಡಿಸಿ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿರುವ ಅಧೀರ್‌ ರಂಜನ್‌ ಚೌಧುರಿ ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಹಾಲಿ ಇರುವ ಮತ್ತು ಮೋದಿ ಅನಾವರಣ ಮಾಡಿದ್ದ ಲಾಂಛನಗಳ ಚಿತ್ರಗಳನ್ನು ಒಟ್ಟಾಗಿ ರಾಷ್ಟ್ರೀಯ ಜನತಾದಳ ಮತ್ತು ಟಿಎಂಸಿ ಸಂಸದರಾದ ಮೊಹುವಾ ಮೊಯಿತ್ರಾ, ಜವಹರ್‌ ಸಿರ್ಕಾರ್ ಸೇರಿ ಹಲವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಹೊಸ ಸ್ವರೂಪಕ್ಕೆ ಆಕ್ಷೇಪ ತೆಗೆದಿದ್ದಾರೆ.

‘ಗಂಭೀರ ಮುಖಭಾವವಿದ್ದ ಅಶೋಕಸ್ತಂಭದ ಸಿಂಹಗಳ ಮುಖವಿದ್ದ ರಾಷ್ಟ್ರೀಯ ಲಾಂಛನಕ್ಕೆ ಈ ಮೂಲಕ ಅಪಮಾನ ಮಾಡಲಾಗಿದೆ. ಎಡಗಡೆ ಇರುವುದು ಅಸಲಿ: ಘನತೆ, ಆತ್ಮವಿಶ್ವಾಸ ಬಿಂಬಿಸಲಿದೆ. ಬಲಗಡೆ ಇರುವುದು, ಮೋದಿ ಆವೃತ್ತಿಯದು. ‘ಗುರ್‌ ಎನ್ನುವಂತಿರುವ, ಅನಗತ್ಯವಾಗಿ ಆಕ್ರಮಣ ಶೈಲಿ ಬಿಂಬಿಸುವ ಲಾಂಛನ’. ನಾಚಿಕೆ ಆಗಬೇಕು. ತಕ್ಷಣ ಇದನ್ನು ಬದಲಿಸಿ’ ಎಂದು ಜವಹರ್‌ ಸಿರ್ಕಾರ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಅನಾವರಣ ಮಾಡಿದ್ದ ಲಾಂಛನದ ಶೈಲಿಗೆ ಇತಿಹಾಸಕಾರ ಎಸ್‌.ಇರ್ಫಾನ್ ಹಬೀಬ್‌ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರೀಯ ಲಾಂಛನ ವಿಷಯದಲ್ಲೂ ಹಸ್ತಕ್ಷೇಪ ಮಾಡುವುದು ಅನಗತ್ಯ, ಇದನ್ನು ತಪ್ಪಿಸಬಹುದಾಗಿತ್ತು. ನಮ್ಮ ಲಾಂಛನದ ಸಿಂಹಗಳು ಏಕೆ ಆಕ್ರಮಣಕಾರಿಯಾಗಿ ತೋರಬೇಕು. ಇವು, ಅಶೋಕ ಸಿಂಹಗಳು. 1950ರಲ್ಲಿಯೇ ಅಂಗೀಕರಿಸಲಾಗಿದೆ’ ಎಂದು ಹಬೀಬ್‌ ಹೇಳಿದ್ದಾರೆ.

‘ಗಾಂಧಿಯಿಂದ ಗೋಡ್ಸೆವರೆಗೆ: ರಾಷ್ಟ್ರೀಯ ಲಾಂಛನದಲ್ಲಿದ್ದ ಸಿಂಹಗಳ ಭಾವವೂ ಬದಲಾಗಿದೆ. ಇದು, ಮೋದಿಯವರ ನವಭಾರತ’ ಎಂದು ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್‌ ಅವರು ಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.