ಮುಂಬೈ: ವಿರೋಧ ಪಕ್ಷಗಳ ಇಂಡಿಯಾ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ) ಒಕ್ಕೂಟದ ಮೂರನೇ ಸಭೆ ಗುರುವಾರ ಇಲ್ಲಿ ನಡೆಯಲಿದೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಎದುರಿಸಲು ಅಗತ್ಯವಿರುವ ರಣತಂತ್ರವನ್ನು ಹೆಣೆಯುವ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ‘ಇಂಡಿಯಾ’ದ ಲಾಂಛನ ಬಿಡುಗಡೆ ಮತ್ತು ಒಕ್ಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕುರಿತೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಮುಂಬೈನ ಗ್ರಾಂಡ್ ಹಯಾಟ್ ಹೋಟೆಲಿನಲ್ಲಿ ಸಭೆ ಆಯೋಜನೆಗೊಂಡಿದ್ದು, 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯನ್ನು ಕಾಂಗ್ರೆಸ್, ಶಿವಸೇನಾ (ಯುಬಿಟಿ) ಹಾಗೂ ಶರದ್ ಪವಾರ್ ಬಣದ ಎನ್‌ಸಿಪಿ ಮೈತ್ರಿಯ ಮಹಾ ವಿಕಾಸ ಅಘಾಡಿ ಆಯೋಜಿಸಿದೆ.
ಪಟ್ನಾ ಹಾಗೂ ಬೆಂಗಳೂರು ಸಭೆಯ ನಂತರ ವಿರೋಧ ಪಕ್ಷಗಳ ಒಕ್ಕೂಟದ ಸದಸ್ಯರು ಮೂರನೇ ಬಾರಿಗೆ ಇಲ್ಲಿ ಸಭೆ ಸೇರುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಎದುರಿಸಲು ನಡೆಸಬೇಕಾದ ರಣತಂತ್ರಗಳ ಕುರಿತು ಚರ್ಚಿಸಲಿದ್ದಾರೆ. ಪ್ರಮುಖ ವಿರೋಧ ಪಕ್ಷಗಳ 11 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆಯ ಕುರಿತೂ ಸಭೆಯಲ್ಲಿ ಘೋಷಿಸುವ ಸಾಧ್ಯತೆ ಇದೆ. ಈ ಸಮಿತಿಯು ಸಂಚಾಲಕರನ್ನು ಹೊಂದಿರಬೇಕೇ ಅಥವಾ ಬೇಡವೇ, ಸೀಟು ಹಂಚಿಕೆ, ಆಂದೋಲನದ ಜಂಟಿ ಕಾರ್ಯಕ್ರಮಗಳು ಮತ್ತು ಸಂವಹನ ಕಾರ್ಯತಂತ್ರವನ್ನು ನಿರ್ವಹಿಸಲು ಕೆಲವು ಉಪ ಗುಂಪುಗಳಿವೆಯೇ ಎಂಬುದರ ಕುರಿತು ವಿರೋಧ ಪಕ್ಷದ ಮೈತ್ರಿಕೂಟವು ಚರ್ಚೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮುಂಬೈಯಲ್ಲಿ ಇಂಡಿಯಾ ಸಭೆ: ವಿಪಕ್ಷ ನಾಯಕರನ್ನು ಸ್ವಾಗತಿಸುತ್ತಿವೆ ಕೇಸರಿ ಧ್ವಜಗಳು
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲಾ, ಬಿಹಾರದ ಲಾಲೂ ಪ್ರಸಾದ್, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಸಿಪಿಐ ಮುಖ್ಯ ಕಾರ್ಯದರ್ಶಿ ಡಿ.ರಾಜಾ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇಶದಲ್ಲಿ ರಾಜಕೀಯ ಬದಲಾವಣೆ ತರುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ. ಬಿಜೆಪಿಯ ಒಬ್ಬ ಪ್ರಧಾನಿ ಆಕಾಂಕ್ಷಿಯ ಎದುರು ವಿರೋಧ ಪಕ್ಷಗಳಲ್ಲಿ ಹಲವು ಮುಖಗಳಿವೆ ಎಂದು ಹೇಳಿವೆ. ಈ ಒಕ್ಕೂಟಕ್ಕೆ ಪ್ರಾದೇಶಿಕ ಪಕ್ಷಗಳೂ ಕೈಜೋಡಿಸಿವೆ.
ಮುಂಬೈಗೆ ಬಂದಿಳಿಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಅವರು ಠಾಕ್ರೆ ಮತ್ತು ಅಮಿತಾಬ್ ಬಚ್ಚನ್ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಶಯ ಕೋರಿದರು.
ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ, ‘ಇಂಡಿಯಾ ಒಕ್ಕೂಟವೇ ಪ್ರಧಾನಿ ಅಭ್ಯರ್ಥಿ. ದೇಶವನ್ನು ಉಳಿಸುವುದೇ ನಮ್ಮ ಪ್ರಮುಖ ಗುರಿ’ ಎಂದರು.
ಬುಧವಾರ ರಾತ್ರಿ ಬಂದಿಳಿದ ಪ್ರತಿನಿಧಿಗಳಿಗೆ ಪೂರಣ್ ಪೋಲಿ ಒಳಗೊಂಡಂತೆ ಮಹಾರಾಷ್ಟ್ರ ಶೈಲಿಯ ಆಹಾರವನ್ನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಉತ್ತರ ಹಾಗೂ ದಕ್ಷಿಣ ಭಾರತ ಶೈಲಿಯ ಆಹಾರವನ್ನು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಆಯೋಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.