ಶೆಮಿನ್ ಜಾಯ್
ನವದೆಹಲಿ: ‘ಇಂಡಿಯಾ’ ಗುಂಪಿನ ವಿವಿಧ ಹಂತಗಳಲ್ಲಿ ಸಮನ್ವಯ ತರುವ ಉದ್ದೇಶದಿಂದ ರಚಿಸಲಾಗಿರುವ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂದು ಗುಂಪಿನ ಪಕ್ಷಗಳಲ್ಲಿ ಅತೃಪ್ತಿ ಶುರುವಾಗಿದೆ. ರಚನೆಯಾಗಿರುವ ಬಹುತೇಕ ಸಮಿತಿಗಳು ಕೈಗೊಂಡ ತೀರ್ಮಾನಗಳು ಅನುಷ್ಠಾನಕ್ಕೆ ಬರುತ್ತಿಲ್ಲ, ಸಮಿತಿಗಳು ತ್ವರಿತವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಅತೃಪ್ತಿಗೆ ಮುಖ್ಯ ಕಾರಣ.
‘ಇಂಡಿಯಾ’ ಗುಂಪಿನ ಸಮನ್ವಯ ಸಮಿತಿಯು ಸೆಪ್ಟೆಂಬರ್ 13ರಂದು ನಡೆದ ಸಭೆಯಲ್ಲಿ, ಭೋಪಾಲ್‌ನಲ್ಲಿ ರ್‍ಯಾಲಿಯೊಂದನ್ನು ಆಯೋಜಿಸುವ ಹಾಗೂ ಜಾತಿ ಗಣತಿ ನಡೆಸುವಂತೆ ಒಕ್ಕೊರಲಿನಿಂದ ಒತ್ತಾಯಿಸುವ ತೀರ್ಮಾನವನ್ನು ಕೈಗೊಂಡಿತ್ತು. ಆದರೆ, ಈ ಎರಡೂ ತೀರ್ಮಾನಗಳು ಅನುಷ್ಠಾನಕ್ಕೆ ಬಂದಿಲ್ಲ. ಈ ತೀರ್ಮಾನದ ವಿಚಾರವಾಗಿ ಗುಂಪಿನ ಒಳಗೆ ವ್ಯಕ್ತವಾಗಿರುವ ವಿರೋಧವೇ ಇವು ಅನುಷ್ಠಾನಕ್ಕೆ ಬಾರದೆ ಇರುವುದಕ್ಕೆ ಕಾರಣ.
ವಿವಿಧ ಮಾಧ್ಯಮ ಸಂಸ್ಥೆಗಳ 14 ಮಂದಿ ನಿರೂಪಕರು ನಡೆಸಿಕೊಡುವ ಕಾರ್ಯಕ್ರಮಗಳಿಗೆ ತನ್ನ ಪ್ರತಿನಿಧಿಗಳನ್ನು ಕಳಿಸಿಕೊಡುವುದಿಲ್ಲ ಎಂದು ‘ಇಂಡಿಯಾ’ ಗುಂಪಿನ ಕಾರ್ಯಕಾರಿ ಸಮಿತಿಯ ಒತ್ತಾಯದ ಕಾರಣಕ್ಕೆ ತೆಗೆದುಕೊಂಡಿರುವ ತೀರ್ಮಾನ ಕೂಡ ಗುಂಪಿನ ಎಲ್ಲರಿಗೂ ಸರಿಕಂಡಿಲ್ಲ. ಇದುವರೆಗೆ ಭೋಪಾಲ್‌ನ ರ್‍ಯಾಲಿಯ ಬದಲಿಗೆ ಯಾವ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬಗ್ಗೆ ತೀರ್ಮಾನ ಆಗಿಲ್ಲ. ಇದು ಗುಂಪಿನ ಕೆಲವು ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆರಂಭದ ಸಭೆಗಳ ನಂತರ ಗುಂಪಿನ ಅತಿಮುಖ್ಯ ಸಮಿತಿಯಾಗಿರುವ ಸಮನ್ವಯ ಸಮಿತಿ ಸೇರಿದಂತೆ ಬೇರೆ ಬೇರೆ ಸಮಿತಿಗಳು ತೀರಾ ಅಪರೂಪಕ್ಕೆ ಸಭೆ ಸೇರುತ್ತಿರುವ ಕಾರಣ ಅವು ಅಪ್ರಸ್ತುತ ಆಗುವ ಅಪಾಯ ಇದೆ ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
‘ಇಂಡಿಯಾ’ ಗುಂಪಿನ ಸಂಘಟನಾತ್ಮಕ ರಚನೆಯು, ಗುಂಪಿನ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡುತ್ತಿದೆ ಎಂದು ಸಿಪಿಎಂ ಈಗಾಗಲೇ ಹೇಳಿದೆ. ಸಮನ್ವಯ ಸಮಿತಿಗೆ ತನ್ನ ಪ್ರತಿನಿಧಿಯನ್ನು ನೇಮಕ ಮಾಡಲು ಅದು ನಿರಾಕರಿಸಿದೆ. ನಿರ್ಣಯ ಕೈಗೊಳ್ಳುವ ವೇಳೆ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗದೆ ಇದ್ದರೆ ಆ ನಿರ್ಣಯಗಳು ಅನುಷ್ಠಾನಕ್ಕೆ ಬರುವುದಿಲ್ಲ ಎಂಬುದನ್ನು ಭೋಪಾಲ್ ರ್‍ಯಾಲಿಯನ್ನು ರದ್ದುಪಡಿಸಿರುವ ನಡೆಯು ತೋರಿಸುತ್ತಿದೆ ಎಂದು ನಾಯಕರೊಬ್ಬರು ಹೇಳಿದ್ದಾರೆ.
ಸಮಿತಿಗಳು ತೆಗೆದುಕೊಳ್ಳುವ ನಿರ್ಣಯಗಳನ್ನು ಪಕ್ಷಗಳ ಪ್ರಮುಖರು ಪಕ್ಕಕ್ಕೆ ಸರಿಸುವುದಾದರೆ ಸಮಿತಿಗಳು ಸಭೆ ನಡೆಸುವುದಕ್ಕೇ ಅರ್ಥವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಮುಖಂಡ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ ಎಂದು ಗೊತ್ತಾಗಿದೆ.
ಸೆಪ್ಟೆಂಬರ್ 13ರಂದು ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ, ‘ಇಂಡಿಯಾ’ ಗುಂಪಿನ ಮೊದಲ ರ್‍ಯಾಲಿಯನ್ನು ಭೋಪಾಲ್‌ನಲ್ಲಿ ಆಯೋಜಿಸುವ ತೀರ್ಮಾನ ಆಯಿತು. ಹಾಗೆಯೇ, ಜಾತಿ ಗಣತಿಗೆ ಸಂಬಂಧಿಸಿದ ವಿಚಾರವನ್ನು ಕೈಗೆತ್ತಿಕೊಳ್ಳಲು ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷಗಳು ಒಪ್ಪಿದ್ದವು.
ಆದರೆ ರ್‍ಯಾಲಿ ನಡೆಸುವ ತೀರ್ಮಾನ ಕೈಗೊಂಡ ಕೆಲವೇ ದಿನಗಳಲ್ಲಿ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಮಲ್ ನಾಥ್ ಅವರು ಭೋಪಾಲ್‌ನಲ್ಲಿ ಅದನ್ನು ಆಯೋಜಿಸುವುದು ಆಗದ ಕೆಲಸ ಎಂದರು. ರ್‍ಯಾಲಿ ಆಯೋಜಿಸಲು ನಿರ್ಧರಿಸಿರುವ ಸಮಯವು ರಾಜಕೀಯ ಲೆಕ್ಕಾಚಾರಗಳ ದೃಷ್ಟಿಯಿಂದ ಮತ್ತು ಪ್ರಯಾಣದ ದೃಷ್ಟಿಯಿಂದ ಪಕ್ಷಕ್ಕೆ ಅನುಕೂಲಕರವಾಗಿಲ್ಲ ಎಂದರು. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ.
ಆದರೆ ಕಮಲ್ ನಾಥ್ ಅವರ ಮುಖ್ಯ ಸಮಸ್ಯೆ ಇದ್ದಿದ್ದು ಡಿಎಂಕೆ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವಲ್ಲಿ. ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ದ ವಿಚಾರವಾಗಿ ನೀಡಿರುವ ಹೇಳಿಕೆಯು ವಿವಾದ ಸೃಷ್ಟಿಸಿದೆ. ಕಮಲ್ ನಾಥ್ ಅವರು ಮೃದು ಹಿಂದುತ್ವದ ನೆಲೆಗಟ್ಟಿನಲ್ಲಿ ತಮ್ಮ ಚುನಾವಣಾ ಅಭಿಯಾನ ರೂಪಿಸಿದ್ದಾರೆ. ಜಾತಿ ಸಮೀಕ್ಷೆಯನ್ನು ಮುನ್ನೆಲೆಗೆ ತರಬೇಕು ಎಂಬ ಪ್ರಸ್ತಾವವನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.