ADVERTISEMENT

ಉತ್ತರ ಪ್ರದೇಶ ಚುನಾವಣೆ: ವಿಪಕ್ಷ ಒಡಕು ಬಿಜೆಪಿಗೆ ಲಾಭ

ಆನಂದ್ ಮಿಶ್ರಾ
Published 5 ಜುಲೈ 2021, 19:30 IST
Last Updated 5 ಜುಲೈ 2021, 19:30 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ನವದೆಹಲಿ: ಕೋವಿಡ್‌–19ರ ಎರಡನೇ ಅಲೆಯ ನಂತರ ತೀವ್ರ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ, ವಿರೋಧ ಪಕ್ಷಗಳಲ್ಲಿನ ಭಿನ್ನಮತವು ಲಾಭವಾಗಿ ಒದಗಿಬಂದಿದೆ.

ವಿರೋಧ ಪಕ್ಷಗಳ ಮುಖಂಡರು ಪರಸ್ಪ‍ರರ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಆಡಳಿತಾರೂಢರ ಪಾಲಿಗೆ ಬೆಳ್ಳಿ ರೇಖೆಯೇ ಆಗಿದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಅಥವಾ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಸಖ್ಯ ಇಲ್ಲದೆಯೂ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷವು ಶಕ್ತವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಬಿಎಸ್‌ಪಿಯು ಬಿಜೆಪಿಯ ‘ಬಿ’ ತಂಡ ಎಂದೂ ಆರೋಪಿಸಿದೆ.

ADVERTISEMENT

ಇದಕ್ಕೆ ತಿರುಗೇಟು ನೀಡಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಕಾಂಗ್ರೆಸ್‌ ಪದದಲ್ಲಿರುವ ಮೊದಲ ಅಕ್ಷರ ‘ಸಿ’ ಎಂದರೆ ಕುಯುಕ್ತಿ (ಕನ್ನಿಂಗ್‌) ಎಂದು ಜರೆದಿದ್ದಾರೆ. ‘ಉತ್ತರಪ್ರದೇಶದಲ್ಲಿ ದಯನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್‌ನ ಈ ಹೇಳಿಕೆ ಆಕ್ಷೇಪವಾರ್ಹವಾದುದು. ಬಿಎಸ್‌ಪಿ ಎಂದರೆ ಬಹುಜನ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗದವರು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರು. ಇವರ ಸಂಖ್ಯೆಯೇ ಹೆಚ್ಚಿರುವುದರಿಂದ ಅವರೆಲ್ಲ ಬಹುಜನ’ ಎಂದಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಸಮಾಜವಾದಿ ಈ ಮೂರೂ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಮಾಯಾವತಿ, ಇದೀಗ, ‘ಈ ಮೂರು ಪಕ್ಷಗಳು ಅಧಿಕಾರದಲ್ಲಿ ಇದ್ದುದೇ ಆದಲ್ಲಿ ಉತ್ತರಪ್ರದೇಶದಲ್ಲಿ ಯಾವ ಚುನಾವಣೆಯೂ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಲಾರದು’ ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಜೊತೆಗೆ ಹಾಗೂ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷವು, ಈ ಬಾರಿ ಯಾವುದೇ ಪ್ರಮುಖ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾಗಿ ಪ್ರಕಟಿಸಿದೆ.

ಕಳೆದ 15 ವರ್ಷಗಳಲ್ಲಿ ಈ ನಾಲ್ಕೂ ಪಕ್ಷಗಳ ಬಲಾಬಲವನ್ನು ಗಮನಿಸುವುದಾದರೆ, ಕಳೆದ ಮೂರು ಚುನಾವಣೆಗಳಲ್ಲಿ (2014, 2019ರ ಲೋಕಸಭಾ ಚುನಾವಣೆಯಲ್ಲಿ ಹಾಗೂ 2017ರ ವಿಧಾನಸಭಾ ಚುನಾವಣೆ) ಮತ ಗಳಿಕೆಯ ಪ್ರಮಾಣದಲ್ಲಿ ಬಿಜೆಪಿಯೇ ಮುಂದಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 40ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಿದ್ದರೆ, 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಈ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸಿಕೊಂಡಿತು.

2007ರಲ್ಲಿ ಶೇ 30ರಷ್ಟು ಮತ ಗಳಿಸಿದ್ದ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳ ಮತ ಗಳಿಕೆ ಸಾಮರ್ಥ್ಯ ಆನಂತರ
ಕ್ಷೀಣಿಸುತ್ತಲೇ ಬಂದಿದೆ.

ಮುಂಬರುವ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್‌ಪಿ, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿನ ಚತುಷ್ಕೋನ ಸ್ಪರ್ಧೆ ಖಚಿತವೇ ಆದಲ್ಲಿ, ಶೇ 30ರಿಂದ ಶೇ 35ರಷ್ಟು ಮತ ಪಡೆದ ಯಾವುದೇ ಪಕ್ಷವು ಅಧಿಕಾರಕ್ಕೆ ಬರಲು ದಾರಿಯಾಗುತ್ತದೆ.

2012ರಲ್ಲಿ 47 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, 2017ರ ಚುನಾವಣೆಯಲ್ಲಿ 312 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೆಚ್ಚುಕಡಿಮೆ ಶೇ 40ರಷ್ಟು ಮತಗಳನ್ನು ಬಿಜೆಪಿಯೊಂದೇ ಪಡೆದಿತ್ತು. 2012ರ ಚುನಾವಣೆಯಲ್ಲಿ ಬಿಎಸ್‌ಪಿ ಶೇ 26ರಷ್ಟು ಹಾಗೂ ಎಸ್‌ಪಿ ಶೇ 29ರಷ್ಟು ಮತ ಗಳಿಸಿದ್ದವು. ಆದರೆ, 2017ರಲ್ಲಿ ಎರಡೂ ಪಕ್ಷಗಳು ಸರಿ ಸುಮಾರು ಶೇ 22ರಷ್ಟು ಮತ ಪಡೆಯಲಷ್ಟೇ ಶಕ್ತವಾಗಿದ್ದವು. ಕಾಂಗ್ರೆಸ್‌ ಪಡೆದ ಮತಗಳ ಪ್ರಮಾಣ ಶೇ 12ರಿಂದ ಶೇ 6.25ಕ್ಕೆ ಇಳಿದಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಶೇ 50ರಷ್ಟು ಮತ ಪಡೆದಿದ್ದರೆ, ಬಿಎಸ್‌ಪಿ ಶೇ 20ಕ್ಕಿಂತ ಹಾಗೂ ಎಸ್‌ಪಿ ಶೇ 18ಕ್ಕಿಂತ ಕಡಿಮೆ ಮತ ಪಡೆದಿವೆ.

2014ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಸುಮಾರು ಶೇ 42.5ರಷ್ಟು ಮತ ಪಡೆದಿದ್ದರೆ, ಎಸ್‌ಪಿ ಹಾಗೂ ಬಿಎಸ್‌ಪಿ ಕ್ರಮವಾಗಿ ಶೇ 22 ಹಾಗೂ ಶೇ 20ರಷ್ಟು ಮತ ಗಳಿಸಿದ್ದವು. ಕಾಂಗ್ರೆಸ್‌ ಮತ ಗಳಿಕೆಯ ಪ್ರಮಾಣ ಶೇ 7.5ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.