ನವದೆಹಲಿ: ಈಶಾನ್ಯ ದೆಹಲಿಯಲ್ಲಿಕಳೆದ ಫೆಬ್ರುವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದ ವಿರೋಧ ಪಕ್ಷದ ನಾಯಕರು, ಗಲಭೆಯಲ್ಲಿ ಪೊಲೀಸರ ಪಾತ್ರದ ಕುರಿತು ಪ್ರಶ್ನೆ ಎತ್ತಿದ್ದಾರೆ.
ಈ ಕುರಿತು ಜಂಟಿ ಮನವಿ ಸಲ್ಲಿಸಿರುವ ನಾಯಕರು,ಪೊಲೀಸರ ಪಾತ್ರದ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆವಿಶ್ವಾಸವಿಲ್ಲ ಎಂದಿದ್ದಾರೆ. ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು. ಈ ಕುರಿತ ತನಿಖೆಗೆ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಜೊತೆಗೆ ದೆಹಲಿ ಪೊಲೀಸ್ ವಿಶೇಷ ಕೋಶವೂ ಗಲಭೆ ಹಿಂದಿನ ಪಿತೂರಿ ಕುರಿತು ತನಿಖೆ ನಡೆಸುತ್ತಿದೆ.
‘ಗಲಭೆ ಸಂದರ್ಭದಲ್ಲಿ ದೆಹಲಿ ಪೊಲೀಸರ ಪಾತ್ರದ ಬಗ್ಗೆ ಗಂಭೀರ ಪ‍್ರಶ್ನೆಗಳಿವೆ. ಪೌರತ್ವ(ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವಜನರನ್ನು ಗುರಿಯಾಗಿಸಿಕೊಂಡು ಪೊಲೀಸರು ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಹಾಗೂ ಗಲಭೆ ಹಿಂದೆ ಇವರ ಪಿತೂರಿ ಇದೆ ಎಂದು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣದಲ್ಲಿ ರಾಜಕೀಯ ನಾಯಕರನ್ನೂ ಗುರಿಯಾಗಿಸಿಕೊಂಡು ಪಿತೂರಿ ನಡೆಸಲಾಗುತ್ತಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹೆಸರನ್ನು ಸೇರಿಸಿರುವ ಪೊಲೀಸ್ ನಡೆಯನ್ನು’ ವಿರೋಧ ಪಕ್ಷದ ನಾಯಕರು ಪತ್ರದಲ್ಲಿ ಟೀಕಿಸಿದ್ದಾರೆ.
‘ಸಮವಸ್ತ್ರದಲ್ಲೇ ಇದ್ದ ಪೊಲೀಸರು, ಗಾಯಗೊಂಡು ರಸ್ತೆಯಲ್ಲಿ ಮಲಗಿದ್ದ ಯವಕರ ಮೇಲೆ ಹಲ್ಲೆ ನಡೆಸಿ, ರಾಷ್ಟ್ರಗೀತೆ ಹಾಡುವಂತೆ ಲಾಠಿಯಲ್ಲಿ ಹೊಡೆಯುತ್ತಿರುವ ವಿಡಿಯೊ, ಬಿಜೆಪಿ ನಾಯಕರ ದ್ವೇಷ ಭಾಷಣದ ಬಗ್ಗೆ ಪೊಲೀಸರ ನಿರ್ಲಕ್ಷ್ಯ ಸೇರಿದಂತೆಹಿಂಸಾಚಾರದಲ್ಲಿ ಪೊಲೀಸರೂ ಭಾಗಿಯಾಗಿರುವುದಕ್ಕೆ ಹಲವು ಸಾಕ್ಷಿಗಳಿವೆ. ಈ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.