ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ಸಂಸತ್‌ನ ಜಂಟಿ ಸಮಿತಿಯು ಕಾನೂನು ಹಾಗೂ ನಿಯಾಮವಳಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷಗಳ ಹಲವು ಸಂಸದರು ಸೋಮವಾರ ನಡೆದ ಸಭೆಯನ್ನು ಬಹಿಷ್ಕರಿಸಿದರು.
ಸಂಸತ್‌ನಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು. ಮುಸಲ್ಮಾನರಿಗೆ ಸಂಬಂಧಿಸಿದ ಕಾನೂನಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿದ ಔಚಿತ್ಯವನ್ನು ಪ್ರಶ್ನಿಸಿದರು.
ಖರ್ಗೆ ಹೆಸರು ಉಲ್ಲೇಖ– ಆಕ್ರೋಶ: ‘ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ ಕಬಳಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ರೆಹಮಾನ್ ಖಾನ್ ಅವರು ತೊಡಗಿದ್ದಾರೆ’ ಎಂದು ಬಿಜೆಪಿಯ ಮಾಜಿ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಸಭೆಯಲ್ಲಿ ಹೆಸರು ಉಲ್ಲೇಖಿಸಿದರು.
‘ಉನ್ನತ ಗಣ್ಯರ ವಿರುದ್ಧ ಸಾಬೀತಾಗದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಸಮಿತಿಯಲ್ಲಿ ಅದನ್ನು ಪ್ರಸ್ತಾಪಿಸುವುದು ಸರಿಯಲ್ಲ. ಸಭೆಯಲ್ಲಿ ಇರದವರ ವಿರುದ್ಧ ಆರೋಪ ಮಾಡುತ್ತಿದ್ದು, ಅವರು ತಮ್ಮ ಮೇಲಿನ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ವಿರೋಧ ಪಕ್ಷದ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ, ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ವಿರೋಧ ಪಕ್ಷದವರ ಆರೋಪಗಳನ್ನು ತಳ್ಳಿಹಾಕಿ, ಮಾಣಿಪ್ಪಾಡಿ ಅವರಿಗೆ ಮಾತನಾಡಲು ಅವಕಾಶ ನೀಡಿದರು.
‘ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳು ಕೆಲವರಿಂದ ಕಬಳಿಕೆಯಾಗಿದ್ದು, ಮಸೂದೆಗೆ ಸಂಬಂಧಿಸಿದ್ದೇ ಆಗಿದೆ’ ಎಂದು ಮಾಣಿಪ್ಪಾಡಿ ಸಮರ್ಥಿಸಿಕೊಂಡರು.
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸಂಸದರಾದ ಗೌರವ್ ಗೊಗೋಯಿ, ಇಮ್ರಾನ್ ಮಸೂದ್, ಡಿಎಂಕೆಯ ಎ.ರಾಜಾ, ಶಿವಸೇನಾದ (ಉದ್ಧವ್ ಬಣ) ಅರವಿಂದ್ ಸಾವಂತ್, ಎಐಎಂಐಎಂನ ಅಸಾದುದ್ದೀನ್ ಒವೈಸಿ, ಸಮಾಜವಾದಿ ಪಕ್ಷದ ಮೊಹಿಬುಲ್ಲಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರು ಸಮಿತಿ ಸಭೆಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು.
‘ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆ ನಡೆಸುತ್ತಿರುವ ಜಂಟಿ ಸದನ ಸಮಿತಿಯು ಕಾನೂನಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಸಾವಂತ್ ಅವರು ಮಾಧ್ಯಮಗಳಿಗೆ ತಿಳಿಸಿದರು.
ಮುಂದಿನ ಕಾರ್ಯವಿಧಾನ ಕುರಿತಂತೆ ವಿರೋಧ ಪಕ್ಷದ ಸಂಸದರು ಪ್ರತ್ಯೇಕ ಸಭೆ ನಡೆಸಿದರು. ಈ ಕುರಿತು ಲೋಕಸಭಾ ಸ್ಪೀಕರ್ ಅವರಲ್ಲಿ ಮನವಿ ಮಾಡುವ ಕುರಿತಂತೆ ಕೆಲವು ಸದಸ್ಯರು ಸಲಹೆ ನೀಡಿದರು. ಸಮಿತಿ ಕಾರ್ಯವೈಖರಿ ಕುರಿತಂತೆ ಮಂಗಳವಾರ ಸ್ಪೀಕರ್ ಪತ್ರ ಬರೆಯುವ ಸಾಧ್ಯತೆಯಿದೆ.
ಜಂಟಿ ಸದನ ಸಮಿತಿಯಲ್ಲಿ ವಕ್ಫ್ ಆಸ್ತಿ ಕಬಳಿಕೆಯ ಉಲ್ಲೇಖ ಅನ್ವರ್ ಮಾಣಿಪ್ಪಾಡಿ ಆರೋಪಕ್ಕೆ ವಿರೋಧ ಪಕ್ಷದ ಸಂಸದರ ಆಕ್ಷೇಪ ಸಭೆ ಬಹಿಷ್ಕಾರ; ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.