ADVERTISEMENT

ಸ್ಥಾಯಿ ಸಮಿತಿ ಮುಂದೆ ಮಣಿಪುರ ಮಾಹಿತಿ ಮಂಡನೆ ಏಕಿಲ್ಲ?: ವಿಪಕ್ಷಗಳ ಪ್ರಶ್ನೆ

ಗೃಹ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿಯಲ್ಲಿನ ವಿಪಕ್ಷಗಳ ಸದಸ್ಯರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 15:32 IST
Last Updated 12 ನವೆಂಬರ್ 2024, 15:32 IST
ರಾಧಾ ಮೋಹನ್‌ ಅಗರವಾಲ್‌ 
ರಾಧಾ ಮೋಹನ್‌ ಅಗರವಾಲ್‌    

ಪ್ರಜಾವಾಣಿ ವಾರ್ತೆ

ನವದೆಹಲಿ: ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಮುಂದೆ ವಿಷಯ ಮಂಡನೆ ಮಾಡುವ ವೇಳೆ, ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ಗೃಹ ಕಾರ್ಯದರ್ಶಿ ಗೋವಿಂದ ಮೋಹನ್‌ ಪ್ರಸ್ತಾಪಿಸದೇ ಇರುವುದನ್ನು ಸಮಿತಿಯಲ್ಲಿರುವ ವಿಪಕ್ಷಗಳ ಸದಸ್ಯರು ಮಂಗಳವಾರ ಪ್ರಶ್ನಿಸಿದ್ದಾರೆ.

ಗೋವಿಂದ ಮೋಹನ್‌ ಅವರು ಈಶಾನ್ಯ ರಾಜ್ಯಗಳ ವಿದ್ಯಮಾನಗಳ ಕುರಿತು ಮೂರು ಪುಟಗಳಷ್ಟು ಮಾಹಿತಿಯನ್ನು ಸಮಿತಿ ಮುಂದೆ ಮಂಡಿಸಿದರು. ಈ ವೇಳೆ, ಹಿಂಸಾಚಾರದಿಂದ ನಲುಗಿರುವ ಮಣಿಪುರ ಕುರಿತು ಮಾಹಿತಿಯನ್ನೇ ಒದಗಿಸಲಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಬಿಜೆಪಿ ಸಂಸದ ರಾಧಾಮೋಹನ್ ಅಗರವಾಲ್‌ ನೇತೃತ್ವದ ಸ್ಥಾಯಿ ಸಮಿತಿಗೆ ಗೋವಿಂದ ಮೋಹನ್‌ ಅವರು ಗೃಹ ಸಚಿವಾಲಯದ ಕಾರ್ಯಗಳ ಕುರಿತು 70 ಪುಟಗಳಷ್ಟು ಮಾಹಿತಿ ಒದಗಿಸಿದ್ದಾರೆ.

ಜಮ್ಮು–ಕಾಶ್ಮೀರ, ಈಶಾನ್ಯ ರಾಜ್ಯಗಳು, ಎಡಪಂಥೀಯ ಉಗ್ರವಾದ, ವಿಪತ್ತು ನಿರ್ವಹಣೆ ಹಾಗೂ ಸೈಬರ್‌ ಅಪರಾಧಗಳು ಸೇರಿದಂತೆ ‘ಪ್ರಮುಖ ಸಾಧನೆಗಳು’ ಹಾಗೂ ‘ವಿಷನ್@2047’ ಕುರಿತು ಅವರು ಮಾಹಿತಿ ನೀಡಿದರು ಎಂದು ಮೂಲಗಳು ಹೇಳಿವೆ.

‘ಈಶಾನ್ಯ ರಾಜ್ಯಗಳಲ್ಲಿ ದಂಗೆಯಂತಹ ಕೃತ್ಯಗಳಲ್ಲಿ ಶೇ 71ರಷ್ಟು ಇಳಿಕೆ ಕಂಡುಬಂದಿದೆ. ಯೋಧರ ಸಾವಿನ ಸಂಖ್ಯೆಯಲ್ಲಿ ಶೇ 60ರಷ್ಟು, ನಾಗರಿಕರ ಸಾವುಗಳ ಸಂಖ್ಯೆಯಲ್ಲಿ ಶೇ 82ರಷ್ಟು ಇಳಿಕೆ ಕಂಡುಬಂದಿದೆ’ ಎಂದು ಗೋವಿಂದ ಮೋಹನ್ ತಿಳಿಸಿದ್ದಾರೆ.

‘ಬಂಡುಕೋರರ ಸಂಘಟನೆಗಳೊಂದಿಗೆ 8 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಅಂದಾಜು 4,500 ಬಂಡುಕೋರರು ಶಸ್ತ್ರ ತ್ಯಾಗ ಮಾಡಿ, ಶರಣಾಗಿದ್ದಾರೆ’ ಎಂದೂ ತಿಳಿಸಿದ್ದಾರೆ.

ವಿಪಕ್ಷಗಳ ಸದಸ್ಯರ ಆಕ್ಷೇಪ: ‘ಒಂದು ನಿರ್ದಿಷ್ಟ ರಾಜ್ಯದಲ್ಲಿನ ವಿದ್ಯಮಾನಗಳ ಕುರಿತು ಪ್ರಸ್ತಾಪವೇ ಇರಲಿಲ್ಲ. ಸಚಿವಾಲಯದ ಸಾಧನೆಗಳು ಮತ್ತು ಮುನ್ನೋಟ ಕುರಿತು ವಿವರಣೆ ನೀಡಲಾಯಿತಾದರೂ, ಯಾವ ಯಾವ ಕ್ಷೇತ್ರಗಳಲ್ಲಿ ಸುಧಾರಣೆ ಕಂಡುಬಂದಿದೆ ಎಂಬ ಕುರಿತು ಮಾಹಿತಿ ನೀಡಲಿಲ್ಲ’ ಎಂದು ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷದ ಸದಸ್ಯರೊಬ್ಬರು ಹೇಳಿದ್ದಾರೆ.

‘ಮಣಿಪುರದಲ್ಲಿ ಸಾಕಷ್ಟು ಮಹಿಳೆಯರು ಹಿಂಸೆಗೆ ಗುರಿಯಾಗಿದ್ದಾರೆ. ಈ ಕುರಿತು ಮಾಹಿತಿಯನ್ನು ಒದಗಿಸಲೇ ಇಲ್ಲ. ರಾಜ್ಯಗಳಿಗೆ 18,020 ‘ಲೈಂಗಿಕ ಹಲ್ಲೆ ಸಾಕ್ಷ್ಯಗಳ’ ಕಿಟ್‌ಗಳು, ಕೇಂದ್ರೀಯ ಸಂತ್ರಸ್ತರ ಪರಿಹಾರ ನಿಧಿಯಿಂದ ₹200 ಕೋಟಿ ಒದಗಿಸಿದ್ದರ ಕುರಿತು ಮಾತ್ರ ತಿಳಿಸಲಾಯಿತು’ ಎಂದು ಸಂಸದರೊಬ್ಬರು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಕುರಿತು ಕೇವಲ ಒಂದು ಪುಟದಷ್ಟು ಮಾಹಿತಿ ನೀಡಲಾಯಿತು ಎಂದು ಟಿಎಂಸಿ, ಟಿಡಿಪಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.