ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಸಮಿತಿಯ ಸಭೆ ನಡೆಸುವಾಗ ವಿರೋಧ ಪಕ್ಷದ ಕೆಲ ಸದಸ್ಯರು ಅವರಿಗೆ ಬೆದರಿಕೆ ಹಾಕಿ, ದಾಖಲೆಗಳನ್ನು ಹರಿದರು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಸಂಬಂಧ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸಂಸದೀಯ ಶಿಷ್ಟಾಚಾರ, ನೀತಿ– ನಿಯಮಗಳನ್ನು ಪಾಲಿಸುವಂತೆ ವಿರೋಧ ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡುವಂತೆ ಮತ್ತು ಈ ಅಶಿಸ್ತಿನ ಹಾಗೂ ಅಸಂಸದೀಯ ವರ್ತನೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಸದ ಸೂರ್ಯ ಅವರು ಪತ್ರದಲ್ಲಿ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ವಕ್ಫ್ ಭೂ ಹಗರಣದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಅಭಿಪ್ರಾಯಗಳನ್ನು ಕೇಳಲು ಸಮಿತಿ ಅಕ್ಟೋಬರ್ 14ರಂದು ಸಭೆ ನಡೆಸುವಾಗ ವಿರೋಧ ಪಕ್ಷದ ಸದಸ್ಯರು ಅಸಂಸದೀಯ ವರ್ತನೆ ತೋರಿದರು ಎಂದು ಸೂರ್ಯ ಆರೋಪಿಸಿದ್ದಾರೆ.
ಸಂಸದೀಯ ಸಮಿತಿಯ ಸಭೆಯಲ್ಲಿ ಪಾಲ್ ಅವರು ಸಂಸದೀಯ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಸ್ಪೀಕರ್‌ಗೆ ಪತ್ರ ಬರೆದ ಕೆಲವು ದಿನಗಳ ನಂತರ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಪತ್ರ ಬರೆದಿದ್ದಾರೆ.
‘ಮಾಣಿಪ್ಪಾಡಿ ಅವರು 2012ರಲ್ಲಿ ಸಲ್ಲಿಸಿದ ವರದಿ ಬಗ್ಗೆ ಚರ್ಚಿಸಲಾಯಿತು. ಸುಮಾರು 2,000 ಎಕರೆ ವಕ್ಫ್ ಭೂಮಿ ಭಾರಿ ಪ್ರಮಾಣದಲ್ಲಿ ಅತಿಕ್ರಮಣವಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಭೂಮಿಯ ಮೌಲ್ಯ ಸುಮಾರು ₹2 ಲಕ್ಷ ಕೋಟಿ. ಈ ಭೂಮಿ ಕೆಲವು ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಪಾಲಾಗಿದೆ. ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದ ಕೂಡಲೇ ಪ್ರತಿಪಕ್ಷದ ಸದಸ್ಯರು ಸಭೆಗೆ ಅಡ್ಡಿಪಡಿಸಿದರು. ಸಮಿತಿ ಅಧ್ಯಕ್ಷರಿಗೆ ಬೆದರಿಕೆ ಹಾಕಿದರು ಮತ್ತು ಸಮಿತಿಯ ದಾಖಲೆಗಳನ್ನು ಹರಿದು ಹಾಕಿದರು’ ಎಂದು ಸೂರ್ಯ ಪತ್ರದಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.