ADVERTISEMENT

ದೆಹಲಿ ಸುಗ್ರೀವಾಜ್ಞೆ: ಮಸೂದೆ ಮಂಡನೆ ಯತ್ನ ಖಂಡಿಸಿ ಬಿಎಸಿ ಸಭೆಗೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 21:30 IST
Last Updated 20 ಜುಲೈ 2023, 21:30 IST
ಜಗದೀಪ್‌ ಧನ್‌ಕರ್
ಜಗದೀಪ್‌ ಧನ್‌ಕರ್   

ನವದೆಹಲಿ: ದೆಹಲಿ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪ ನೀಡಲು ಮಸೂದೆ ಮಂಡನೆಗಾಗಿ ಕಲಾಪ ಪಟ್ಟಿಗೆ ಸೇರಿಸಿದ ಸರ್ಕಾರದ ಕ್ರಮವನ್ನು ವಿರೋಧಿಸಿ ವಿಪಕ್ಷದ ಸದಸ್ಯರು ರಾಜ್ಯಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯನ್ನು ಬಹಿಷ್ಕರಿಸಿದರು.

ರಾಜ್ಯಸಭೆ ಅಧ್ಯಕ್ಷ ಜಗದೀಪ್‌ ಧನ್‌ಕರ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಸುಗ್ರೀವಾಜ್ಞೆಗೆ ಕಾಯ್ದೆಯ ರೂಪ ನೀಡುವ ‘ದೆಹಲಿ ಕೇಂದ್ರಾಡಳಿತ ಪ್ರದೇಶ (ತಿದ್ದುಪಡಿ) ಮಸೂದೆ 2023’ಯನ್ನು ಮಂಡಿಸುವ ಸಂಬಂಧ ಸದನದ ಕಲಾಪ ಪಟ್ಟಿಗೆ ಸೇರಿಸಲಾಗಿತ್ತು.

ಇದನ್ನು ಕಾಂಗ್ರೆಸ್‌ನ ಜೈರಾಂ ರಮೇಶ್, ತೃಣಮೂಲ ಕಾಂಗ್ರೆಸ್‌ನ ಡೆರೆಕ್‌ ಒಬ್ರಿಯಾನ್, ಆಮ್‌ ಆದ್ಮಿ ಪಕ್ಷದ ಸಂಜಯ್ ಸಿಂಗ್, ಬಿಆರ್‌ಎಸ್‌ ಪಕ್ಷದ ಕೇಶವರಾವ್‌ ಅವರು ವಿರೋಧಿಸಿದರು.

ADVERTISEMENT

ಕೇಶವರಾವ್ ಅವರು ಬಳಿಕ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಪ್ರತಿಭಟನೆಗೂ ಕೈಜೋಡಿಸಿದರು. ಈ ಮಸೂದೆಯು ಸಂವಿಧಾನದ ಒಕ್ಕೂಟದ ಆಶಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಮೂಲಗಳ ಪ್ರಕಾರ, ಮಸೂದೆಯ ಚರ್ಚೆಗೆ ಎರಡು ಗಂಟೆ ಸಮಯ ನಿಗದಿಪಡಿಸಲು ಉದ್ದೇಶಿಸಲಾಗಿತ್ತು. ಆದರೆ, ಎಎಪಿಯ ಸಿಂಗ್‌ ಅವರು, ‘ಸದ್ಯ ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಮಸೂದೆ ಮಂಡನೆ ಹೇಗೆ ಸಾಧ್ಯ?’ ಎಂದು ಆಕ್ಷೇಪ ಎತ್ತಿದರು.

ಈ ಆಕ್ಷೇಪಕ್ಕೆ ಇತರರೂ ದನಿಗೂಡಿಸಿದರು. ಸಭೆ ಬಹಿಷ್ಕರಿಸಿ ಹೊರಹೋಗುವ ಮೊದಲು ನಮ್ಮ ಪ್ರತಿಭಟನೆಯನ್ನು ಸಭೆಯ ನಡಾವಳಿಯಲ್ಲಿ ದಾಖಲಿಸಬೇಕು ಎಂದು ಡೆರೆಕ್‌ ಒಬ್ರಿಯಾನ್ ಪಟ್ಟುಹಿಡಿದರು.

‘ಕಲಾಪ ಸಲಹಾ ಸಮಿತಿಯಲ್ಲಿ ಮಸೂದೆ ಪ್ರಸ್ತಾಪವೇ ಅಸಾಂವಿಧಾನಿಕ. ನಾವು ಆಕ್ಷೇಪ ಎತ್ತಿದೆವು. ಆದರೆ, ಸರ್ಕಾರ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಸಭೆ ಬಹಿಷ್ಕರಿಸಿದೆವು’ ಎಂದು ಸಿಂಗ್‌ ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.