ಲಖನೌ: ‘ಪ್ರಧಾನಿ ನರೇಂದ್ರ ಮೋದಿಯವರ ಭಯದಿಂದ ವಿರೋಧ ಪಕ್ಷಗಳು ಈಗ ಒಟ್ಟಾಗಿವೆ’ ಎಂದು ಪಟ್ನಾದಲ್ಲಿ ವಿರೋಧ ಪಕ್ಷಗಳು ನಡೆಸಿದ ಸಭೆ ಕುರಿತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗೆ ಹಾವು ಮುಂಗುಸಿ ಒಟ್ಟಿಗೆ ಇರಲು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ಅವಕಾಶವಾದಿ ಪಕ್ಷಗಳು ಒಂದಾಗಲಾರವು, ಮೋದಿಗೆ ಹೆದರಿ ಮುಂದೆ ಬಂದಿವೆ ಅಷ್ಟೇ ಎಂದು ಹೇಳಿದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿಯನ್ನು ವಿರೋಧಿಸಿದವರು, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದವರು, ಬಡವರ, ರೈತ ವಿರೋಧಿಗಳು ಹಾಗೂ ಬಿಜೆಪಿ ಮತ್ತು ಅಭಿವೃದ್ಧಿಗೆ ವಿರುದ್ಧವಾದವರು, ಪಟ್ನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮೌರ್ಯ ತಿಳಿಸಿದರು.
ವಿರೋಧ ಪಕ್ಷಗಳು ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಕಿಡಿಕಾರಿದರು.
‘ಭಾರತದ ಕುಟುಂಬ ರಾಜಕೀಯದ ‘ಶಿರೋಮಣಿ’ (ನಾಯಕ) ಕಾಂಗ್ರೆಸ್ ಆಗಿದೆ. ಲಾಲು, ಅಖಿಲೇಶ್, ಮಮತಾ, ಸ್ಟಾಲಿನ್, ಹೇಮಂತ್, ಮೆಹಬೂಬ, ಠಾಕ್ರೆ ಮತ್ತು ಪವಾರ್ ಅವರ ಕುಟುಂಬಗಳು ಅದರ ಮಾದರಿಯಾಗಿದ್ದಾರೆ. ಆದರೆ, ಮೋದಿಯವರ ಕುಟುಂಬ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ರಾಜಕೀಯದ ಮುಂದೆ ವಿರೋಧ ಪಕ್ಷಗಳ ನಡೆ ಯಶಸ್ವಿಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದರು.
ವಿರೋಧ ಪಕ್ಷಗಳ ಸಭೆ ಕುರಿತು ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಕೂಡ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಅಂಗವಾಗಿ ಕೌಶಂಬಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೂ, ಬಿಜೆಪಿ ಉತ್ತರ ಪ್ರದೇಶದ ಎಲ್ಲಾ 80 ಲೋಕಸಭೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.