ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರ, ಕೋವಿಡ್–19 ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ದೃಢ ನಿಲುವು ತೆಗೆದುಕೊಂಡಿದ್ದಕ್ಕೆ ಹಾಗೂ ‘ಸತ್ಯ’ವನ್ನು ಹೇಳುತ್ತಿದ್ದ ಕಾರಣ ಗೋವಾ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿವೆ.
‘ಮಲಿಕ್ ಅವರು ಸತ್ಯದ ಪರವಾಗಿ ನಿಲ್ಲುತ್ತಿದ್ದರು. ಕರ್ನಾಟಕದಿಂದ ಮಹದಾಯಿ ನದಿ ನೀರು ತಿರುವು ವಿಚಾರದಲ್ಲಿ ಅವರ ದೃಢ ನಿಲುವು ಅವರ ವರ್ಗಾವಣೆಗೆ ಒಂದು ಕಾರಣ.ಮಲಿಕ್ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳ ಹಿಂದೆ ಗೋವಾದ ಜನರು ಹಾಗೂ ಅಲ್ಲಿನ ಪರಿಸರ ಮತ್ತು ಪ್ರಕೃತಿಯ ರಕ್ಷಣೆಯೇ ಏಕೈಕ ಉದ್ದೇಶವಾಗಿತ್ತು’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಆರ್ಥಿಕ ಪುನಃಶ್ಚೇತನ, ಕೋವಿಡ್–19 ಪಿಡುಗಿನ ನಿಯಂತ್ರಣ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದ ಅವರು ಜನರ ಭಾವನೆ ಹಾಗೂ ಅಭಿಪ್ರಾಯಗಳ ಪರ ನಿಲ್ಲುತ್ತಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಹಾಗೂ ಸತ್ಯ ಪರಸ್ಪರ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಎಂದಿರುವ ಕಾಮತ್, ‘ಗೋವಾಗೆ ಸತ್ಯಪಾಲ್ ಮಲಿಕ್‌ರಂಥ ಪ್ರಾಮಾಣಿಕ, ಸತ್ಯವಂತ ವ್ಯಕ್ತಿಯ ಅಗತ್ಯತೆ ಇದ್ದ ಸಂದರ್ಭದಲ್ಲೇ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯದ ಆರ್ಥಿಕ ದುಸ್ಥಿತಿಯ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿದ್ದ ಅವರು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಸೂಚಿಸಿದ್ದರು’ ಎಂದು ಹೇಳಿದರು.
‘ಕರಾವಳಿ ರಾಜ್ಯವಾಗಿರುವ ಗೋವಾದಲ್ಲಿನ ಕೋವಿಡ್ ಸ್ಥಿತಿಯ ಕುರಿತು ಮಲಿಕ್ ಸತ್ಯ ನುಡಿದಿದ್ದರು. ಮಹದಾಯಿ ವಿವಾದ ವಿಚಾರದಲ್ಲಿ ದೃಢ ನಿಲುವು ಹೊಂದಿದ್ದರು. ಹೊಸ ರಾಜಭವನ ನಿರ್ಮಾಣಕ್ಕೂ ಅವರು ವಿರೋಧಿಸಿದ್ದರು. ಮುಖ್ಯಮಂತ್ರಿಗಳ ನಡೆಯನ್ನೂ ಟೀಕಿಸಿದ್ದರು’ ಎಂದು ಗೋವಾ ಫಾರ್‌ವರ್ಡ್ ಪಕ್ಷ(ಜಿಎಫ್‌ಪಿ) ಮುಖ್ಯಸ್ಥ ವಿಜಯ್ ಸರ್‌ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮಲಿಕ್ ಅವರ ವರ್ಗಾವಣೆ ನಮಗೆ ಒಂದು ರೀತಿಯಲ್ಲಿ ಮೊದಲೇ ತಿಳಿದಿತ್ತು. ಅವರನ್ನು ವರ್ಗಾವಣೆ ಮಾಡಿ ಮಹಾರಾಷ್ಟ್ರದ ರಾಜ್ಯಪಾಲರಿಗೇ ಗೋವಾ ರಾಜ್ಯಪಾಲರ ಹೊಣೆ ನೀಡಿರುವುದರ ಹಿಂದಿನ ಉದ್ದೇಶ ಏನು? ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ಹಾಗೂ ಸೋಂಕಿನಿಂದ ಅತಿ ಹೆಚ್ಚು ಜನರು ಮೃತಪಟ್ಟಿರುವ ಮಹಾರಾಷ್ಟ್ರದ ರಾಜ್ಯಪಾಲರಿಗೆ ಹೆಚ್ಚುವರಿ ಹೊಣೆ ನೀಡಿ ಹೇಗೆ ಇದನ್ನು ಸಮರ್ಥಿಸಿಕೊಳ್ಳುತ್ತಾರೊ’ ಎಂದೂ ಜಿಎಫ್‌ಪಿ ಪ್ರಶ್ನಿಸಿದೆ.
ಮುಖ್ಯಾಂಶಗಳು
-ಕಳೆದ ಎರಡು ವರ್ಷದಲ್ಲಿ ಮೂರನೇ ಬಾರಿಗೆ ವರ್ಗಾವಣೆ
-ಕಳೆದ ಅಕ್ಟೋಬರ್‌ನಲ್ಲಿ ಗೋವಾ ರಾಜ್ಯಪಾಲರಾಗಿ ಅಧಿಕಾರ ಸ್ವೀಕಾರ
-ಅದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್
-ಕೋವಿಡ್–19 ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.