ನವದೆಹಲಿ: ಸಂಸತ್‌ನಲ್ಲಿ ವಿರೋಧ ಪಕ್ಷಗಳ ಸಂಸದರ ಪ್ರತಿಭಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದು, ಪ್ರತಿಪಕ್ಷಗಳ ವರ್ತನೆಯಿಂದಾಗಿ 2024ರ ಲೋಕಸಭೆ ಚುನಾವಣೆಗಳಲ್ಲಿ ಅವರ ಸಂಖ್ಯೆ ಇನ್ನಷ್ಟು ಕುಸಿತಗೊಳ್ಳುವುದು ಖಚಿತ. ಬಿಜೆಪಿ ತನ್ನ ಬಲ ವರ್ಧಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಭದ್ರತಾ ಲೋಪವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದೊಂದು ಗಂಭೀರ ವಿಷಯ ಎಂದು ಪ್ರಧಾನಿ ಮೋದಿ ಹೇಳಿದ್ದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಧ್ಯಮದವರಿಗೆ ತಿಳಿಸಿದರು.
‘ಇದೊಂದು ಗಂಭೀರ ವಿಷಯ. ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳ ಮೇಲೆ ವಿಶ್ವಾಸವಿರಿಸುವ ಪ್ರತಿಯೊಬ್ಬರೂ ಅದನ್ನು ಖಂಡಿಸಬೇಕಿತ್ತು‘ ಎಂದು ಪ್ರಧಾನಿ ಹೇಳಿರುವುದಾಗಿ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ತಿಳಿಸಿದರು
ಇತ್ತೀಚೆಗೆ ನಡೆದ ವಿಧಾನಸಭೆ ಸೋಲಿನಿಂದಾಗಿ ವಿರೋಧ ಪಕ್ಷಗಳು ಕಂಗೆಟ್ಟಿವೆ. ಹತಾಶೆಯಿಂದ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದಿರುವ ಪ್ರಧಾನಿ, ಸಂಯಮವನ್ನು ಕಾಪಾಡಿಕೊಳ್ಳುವಂತೆ ಹಾಗೂ ಪ್ರಜಾಸತ್ತಾತ್ಮಕ ನಿಯಮಗಳನ್ನು ಪಾಲಿಸುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿದ್ದಾರೆ.
ಗುರುವಾರ ನಡೆಯುವ ಇಂಡಿಯಾ ಮೈತ್ರಿಕೂಟದ ಸಭೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, ‘ನಮ್ಮ ಸರ್ಕಾರವನ್ನು ಕಿತ್ತೊಗೆಯುವುದು ಅವರ ಉದ್ದೇಶ. ದೇಶದ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ’ ಎಂದು ಹೇಳಿದರು.
ಅಲ್ಲದೆ ಅಧಿವೇಶನದ ಬಳಿಕ ಗಡಿ ಗ್ರಾಮಗಳಿಗೆ ಭೇಟಿ ನೀಡುವಂತೆ ಬಿಜೆಪಿ ಸಂಸದರಿಗೆ ಮೋದಿ ನಿರ್ದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.