ADVERTISEMENT

ಒಆರ್‌ಒಪಿ ತಾರತಮ್ಯ ನಿವಾರಿಸಲು ಅಂತಿಮ ಗಡುವು

ಕೇಂದ್ರ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 13:31 IST
Last Updated 30 ಜುಲೈ 2024, 13:31 IST
supreme-court-
supreme-court-   

ನವದೆಹಲಿ: ಸೇನೆಯಲ್ಲಿ ಪೂರ್ಣಾವಧಿಗೆ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ‘ಒಂದು ಶ್ರೇಣಿ ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆಗೆ ಅನುಗುಣವಾಗಿ ಪಾವತಿಸಬೇಕಿರುವ ಪಿಂಚಣಿ ಬಗ್ಗೆ ವರ್ಷಗಳಿಂದ ಯಾವುದೇ ತೀರ್ಮಾನ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ₹2 ಲಕ್ಷ ದಂಡವನ್ನೂ ವಿಧಿಸಿದೆ.

ಈ ನಿವೃತ್ತ ಅಧಿಕಾರಿಗಳಿಗೆ ಒಆರ್‌ಒಪಿ ಅಡಿ ಸಿಗುವ ಪಿಂಚಣಿಯಲ್ಲಿನ ತಾರತಮ್ಯವನ್ನು ಪರಿಹರಿಸಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಆರ್. ಮಹಾದೇವನ್ ಅವರು ಇದ್ದ ವಿಭಾಗೀಯ ಪೀಠವು ಕೇಂದ್ರ ಸರ್ಕಾರಕ್ಕೆ ನವೆಂಬರ್‌ 14ರವರೆಗೆ ಕಡೆಯ ಅವಕಾಶ ನೀಡಿದೆ. 

ದಂಡ ರೂಪದಲ್ಲಿ ಪಾವತಿಸಬೇಕಿರುವ ₹2 ಲಕ್ಷವನ್ನು ಕೇಂದ್ರವು ಸೇನಾ ಸಿಬ್ಬಂದಿಯ ಅಭಿವೃದ್ಧಿ ನಿಧಿಗೆ ಜಮಾ ಮಾಡಬೇಕು. ಕೇಂದ್ರವು ನವೆಂಬರ್‌ 14ಕ್ಕೆ ಮೊದಲು ಯಾವುದೇ ತೀರ್ಮಾನ ಕೈಗೊಳ್ಳದೆ ಇದ್ದರೆ ಈ ಅಧಿಕಾರಿಗಳ ಪಿಂಚಣಿಯನ್ನು ಶೇಕಡ 10ರಷ್ಟು ಹೆಚ್ಚಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಪೀಠವು ಹೇಳಿದೆ.

ADVERTISEMENT

ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ಟಿ ಅವರು, ‘ಕೊಚ್ಚಿಯಲ್ಲಿ ಇರುವ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು (ಎಎಫ್‌ಟಿ) ಸರಿಪಡಿಸಬೇಕಿರುವ ಆರು ಲೋಪಗಳನ್ನು ಗುರುತಿಸಿದೆ. ಆದರೆ ಕೇಂದ್ರವು ಈ ವಿಚಾರವಾಗಿ ಇನ್ನಷ್ಟೇ ನಿಲುವು ತೆಗೆದುಕೊಳ್ಳಬೇಕಿದೆ’ ಎಂದು ವಿವರಿಸಿದರು.

‘ಇದು ಇನ್ನೂ ಎಷ್ಟು ವರ್ಷ ನಡೆಯುತ್ತದೆ? ಶೇಕಡ 10ರಷ್ಟು ಹೆಚ್ಚು ಪಿಂಚಣಿಯನ್ನು ನೀವು ಪಾವತಿಸಬೇಕು, ಇಲ್ಲವಾದರೆ ನಾವು ನಿಮ್ಮ ಮೇಲೆ ದಂಡ ವಿಧಿಸುತ್ತೇವೆ. ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾವು ಬಯಸಿದ್ದೆವು, ಆದರೆ ನೀವು ತೀರ್ಮಾನ ಕೈಗೊಂಡಿಲ್ಲ. ಇದು 2021ರ ವಿಚಾರ. ಇಂದಿಗೂ ಯಾವುದೇ ತೀರ್ಮಾನ ಆಗಿಲ್ಲ’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಸರ್ಕಾರವು ನಿರ್ಧಾರವನ್ನು ಬಿಡಿಬಿಡಿಯಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ನಿರ್ಧಾರವು ಇತರರ ಮೇಲೆಯೂ ಪರಿಣಾಮ ಉಂಟುಮಾಡಬಹುದಾದ ಕಾರಣ, ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ, ಆರೂ ಲೋಪಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಭಟ್ಟಿ ವಿವರಿಸಿದರು.

‘ನಮಗೆ ಇನ್ನಷ್ಟು ಸಮಯಾವಕಾಶ ಕೊಡಿ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಈ ವಿಚಾರವಾಗಿ ಪ್ರಮಾಣಪತ್ರವೊಂದನ್ನು ಸಲ್ಲಿಸುತ್ತೇವೆ. ನಮಗೆ ಮೂರು ತಿಂಗಳ ಕಾಲಾವಕಾಶ ಕೊಡಿ’ ಎಂದು ಭಟ್ಟಿ ಕೋರಿದರು. ಆದರೆ, ಹೆಚ್ಚುವರಿ ಕಾಲಾವಕಾಶ ನೀಡಲು ಪೀಠವು ಆರಂಭದಲ್ಲಿ ಒಪ್ಪಿಗೆ ನೀಡಲಿಲ್ಲ. ಈ ಅಧಿಕಾರಿಗಳಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿತು.

ಹೆಚ್ಚುವರಿ ಪಿಂಚಣಿ ನೀಡಲು ನಿರ್ದೇಶಿಸುವ ಆದೇಶವನ್ನು ಬರೆಸಲು ಪೀಠವು ಮುಂದಾದಾಗ, ಮಧ್ಯಪ್ರವೇಶಿಸಿದ ಭಟ್ಟಿ ಅವರು, ‘ದಂಡವನ್ನೇ ವಿಧಿಸಿ. ಏಕೆಂದರೆ ಹೆಚ್ಚುವರಿ ಪಿಂಚಣಿಗೆ ಆದೇಶಿಸುವುದಕ್ಕಿಂತ ದಂಡ ಪಾವತಿಯೇ ಹೆಚ್ಚು ನ್ಯಾಯಸಮ್ಮತವಾಗುತ್ತದೆ’ ಎಂದು ಮನವಿ ಮಾಡಿದರು.

ನಂತರ ಪೀಠವು ಅಂತಿಮ ಅವಕಾಶವಾಗಿ ನವೆಂಬರ್‌ 14ರ ಗಡುವು ನೀಡಿತು. ದಂಡದ ಮೊತ್ತವನ್ನು ನಾಲ್ಕು ವಾರಗಳಲ್ಲಿ ಜಮಾ ಮಾಡಬೇಕು ಎಂದು ತಿಳಿಸಿತು.

‘ಇದೇನಿದು...? ಇದರಿಂದ ಈ ಅಧಿಕಾರಿಗಳಿಗೆ ಸಮಾಧಾನ ಆಗುವುದಿಲ್ಲ. ಅವರು ನಿವೃತ್ತ ಕ್ಯಾಪ್ಟನ್‌ಗಳು. ಅವರಿಗೆ ಮಾತಿಗೆ ಅವಕಾಶವೇ ಇಲ್ಲವಾಗಿದೆ. ನಿಮ್ಮನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಿಲ್ಲ. ಶೇಕಡ 10ರಷ್ಟು ಹೆಚ್ಚು ಪಿಂಚಣಿ ನೀಡಿ ಅಥವಾ ದಂಡ ಪಾವತಿಸಿ. ಆಯ್ಕೆ ನಿಮ್ಮದು.’ – ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.