ನವದೆಹಲಿ: 2023ರ ತಮ್ಮ ಕೊನೆಯ ಮನ್ ಕಿ ಬಾತ್ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 'RRR'ನ ‘ನಾಟು ನಾಟು’ ಮತ್ತು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಈ ವರ್ಷದ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದನ್ನು ಪ್ರಸ್ತಾಪಿಸಿದ್ದಾರೆ.
108ನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಅವರು, ವಿಶ್ವವು ಭಾರತದ ಸೃಜನಶೀಲತೆಯನ್ನು ನೋಡಿದೆ ಮತ್ತು ಪರಿಸರದೊಂದಿಗೆ ದೇಶದ ಮನರಂಜನಾ ಉದ್ಯಮದ ಸಂಬಂಧವನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು.
‘ಸ್ನೇಹಿತರೇ, ‘ನಾಟು ನಾಟು’ ಚಿತ್ರಕ್ಕೆ ಆಸ್ಕರ್ ಸಿಕ್ಕಾಗ ಇಡೀ ದೇಶವೇ ಖುಷಿಯಿಂದ ಕುಣಿದು ಕುಪ್ಪಳಿಸಿತ್ತು. ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ನೀಡಿದ ಗೌರವವನ್ನು ಕೇಳಿ ಯಾರಿಗೆ ಸಂತೋಷವಾಗಿಲ್ಲ ಹೇಳಿ? ಇವುಗಳ ಮೂಲಕ ಜಗತ್ತು ಭಾರತದ ಸೃಜನಶೀಲತೆಗೆ ಸಾಕ್ಷಿಯಾಯಿತು. ಪರಿಸರದ ಜೊತೆ ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡಿತು’ ಎಂದು ಮೋದಿ ಹೇಳಿದರು.
ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ, ಚಂದ್ರಬೋಸ್ ಗೀತ ರಚನೆಯ ತೆಲುಗಿನ RRR ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು. ಇದು ಈ ಬಾರಿಯ ಆಸ್ಕರ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪ್ರಶಸ್ತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.