ನವದೆಹಲಿ: ವಿವಿಐಪಿಗಳಿಗಾಗಿ ಎರಡು ವಿಶೇಷ ವಿಮಾನ ಖರೀದಿಸಿರುವ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಸೈನಿಕರನ್ನು ಹುತಾತ್ಮರಾಗಲು ಕಳಿಸುತ್ತಿದ್ದರೆ, ಇತ್ತ ಸರ್ಕಾರ ಮಾತ್ರ ಪ್ರಧಾನಿಗಳಿಗಾಗಿ ₹ 8,400 ವ್ಯಯಿಸುತ್ತಿದೆ ಎಂದು ಶನಿವಾರ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಸೈನಿಕರನ್ನು ಬುಲೆಟ್ ಪ್ರೂಫ್ ರಹಿತ ಟ್ರಕ್‌ಗಳಲ್ಲಿ ಹುತಾತ್ಮರಾಗಲು ಕಳುಹಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳಿಗೆ ₹ 8,400 ಕೋಟಿಗಳ ವಿಮಾನವನ್ನು ಮೀಸಲಿಟ್ಟಿದೆ. ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ಚಲಿಸುತ್ತಿರುವ ವಾಹನದೊಳಗೆ ಕುಳಿತು ಮಾತನಾಡುತ್ತಿರುವ ಹಲವಾರು ಸೈನಿಕರು, ಗುಂಡು ನಿರೋಧಕವಲ್ಲದ ಟ್ರಕ್‌ಗಳಲ್ಲಿ ಜನರನ್ನು ಕಳುಹಿಸುವುದು ಎಷ್ಟು ಅಪಾಯಕಾರಿ. ನಮ್ಮ ಅಧಿಕಾರಿಯು ಇಂತಹ ವಾಹನದಲ್ಲಿ ಕಳುಹಿಸಿ ನಮ್ಮ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಆರೋಪಿಸುತ್ತಾ ಚರ್ಚಿಸುತ್ತಿರುವುದು ಕಂಡುಬಂದಿದೆ.
ವಿವಿಐಪಿ ವಿಮಾನಗಳನ್ನು ಖರೀದಿಸಿರುವ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಕಳೆದ ವಾರ ಪಂಜಾಬ್‌ನಲ್ಲಿ ನಡೆದ ರ್ಯಾಲಿಯಲ್ಲೂ ರಾಹುಲ್ ಈ ವಿಚಾರವಾಗಿ ಮಾತನಾಡಿದ್ದರು.
ಒಂದೆಡೆ, ಪ್ರಧಾನಿ ಮೋದಿ ₹ 8,000 ಕೋಟಿ ಗಳ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಮತ್ತೊಂದೆಡೆ, ಚೀನಾ ನಮ್ಮ ಗಡಿಯಲ್ಲಿದೆ ಮತ್ತು ನಮ್ಮ ಗಡಿಗಳನ್ನು ರಕ್ಷಿಸಲು ನಮ್ಮ ಭದ್ರತಾ ಪಡೆಗಳು ಕಠಿಣ ಶೀತವನ್ನು ಎದುರಿಸುತ್ತಿವೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.