ಅಗರ್ತಲಾ: ತ್ರಿಪುರಾದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಶುಕ್ರವಾರ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಣಿಕ್ ಅವರು ಹೊಸ ಸರ್ಕಾರದ ರಚನೆಗೆ ಹಕ್ಕು ಮಂಡಿಸಿದ ಕಾರಣ, ಮುಂಬರಲಿರುವ ದಿನಗಳಲ್ಲಿ ತ್ರಿಪುರಾದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಗುರುವಾರ ತ್ರಿಪುರಾ ವಿಧಾನಸಭೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಪಕ್ಷಗಳು ಕ್ರಮವಾಗಿ 32 ಹಾಗೂ ಒಂದು ಸ್ಥಾನಗಳನ್ನು ಗೆದ್ದಿವೆ. ಈ ಮೂಲಕ ಸತತ ಎರಡನೇ ಬಾರಿಗೆ ಈ ಮೈತ್ರಿಕೂಟವು ತ್ರಿಪುರಾದಲ್ಲಿ ಅಧಿಕಾರಕ್ಕೆ ಮರಳಿದೆ.
ರಾಜಭವನದ ಹೊರಗೆ ವರದಿಗಾರರೊಂದಿಗೆ ಮಾತನಾಡಿದ ಮಾಣಿಕ್ ಅವರು ‘ನಾನು ರಾಜ್ಯಪಾಲರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ರಚನೆಯಾಗುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ನನಗೆ ತಿಳಿಸಿದ್ದಾರೆ’ ಎಂದರು.
‘ತ್ರಿಪುರಾದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಮಾಡಲಾಗುತ್ತದೆ. ಈ ಸಭೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ’ ಎಂದು ಬಿಜೆಪಿ ಮುಖ್ಯ ವಕ್ತಾರ ಸುಬ್ರತ ಚಕ್ರವರ್ತಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.