ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಅವರು ಈಚೆಗೆ ದೇಶದ ಅತ್ಯುನ್ನತ ಮೂರನೇ ನಾಗರಿಕ ಗೌರವವಾದ ‘ಪದ್ಮಭೂಷಣ’ಪ್ರಶಸ್ತಿಯನ್ನು ಸ್ವೀಕರಿಸುವುದು ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದ್ದರೂ ಕಣಿವೆಯ ರಾಜಕಾರಣಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಆಜಾದ್ ಪರ ಅಥವಾ ವಿರುದ್ಧವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೂ ಯಾವ ರಾಜಕಾರಣಿಯೂ ಪ್ರತಿಕ್ರಿಯಿಸಿಲ್ಲ. ಸಾಮಾನ್ಯವಾಗಿ ಬಹಿರಂಗವಾಗಿ ಮಾತನಾಡುವ ಜಮ್ಮು–ಕಾಶ್ಮೀರ ಕಾಂಗ್ರೆಸ್ ಘಟಕದ ನಾಯಕರು ಹಾಗೂ ಆಜಾದ್ ಪರ ಹಾಗೂ ವಿರೋಧಿ ಗುಂಪು ಕೂಡ ಈ ಕುರಿತು ಒಂದೂ ಮಾತನಾಡಿಲ್ಲ.
‘ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರತಿಕ್ರಿಯಿಸುವುದು ಕಷ್ಟ. ಬಿಜೆಪಿ ಹಾಗೂ ಆಜಾದ್ ಇಬ್ಬರೂ ಬಹಳ ಬುದ್ದಿವಂತಿಕೆಯಿಂದ ರಾಜಕೀಯ ಮಾಡುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಳೆದ ಮೂರು ವರ್ಷಗಳಲ್ಲಿನ ರಾಜಕೀಯ ಪರಿಸ್ಥಿತಿಯು ಆಜಾದ್ ಅವರನ್ನು ಬೆಂಬಲಿಸಲು ಅಥವಾ ವಿರೋಧಿಸಲು ಕಷ್ಟವನ್ನು ತಂದೊಡ್ಡಿದೆ’ ಎಂದು ಜಮ್ಮು–ಮತ್ತು ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.
‘ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಆಜಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿರುವುದಕ್ಕೆ ಅಭಿನಂದಿಸಿಲ್ಲ ಎಂಬುದು ನಮಗೂ ಗೊತ್ತಿದೆ. ಈ ನಿಲುವು ಒಟ್ಟಾರೆ ಪಕ್ಷದ ಹಿತಾಸಕ್ತಿ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದರೆ ಇನ್ನೂ ಹಲವು ಕೇಂದ್ರ ನಾಯಕರಂತೆ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನಲ್ಲಿ ಯಾರೂ ಬಹಿರಂಗವಾಗಿ ಮಾತನಾಡುವ ಮನಸ್ಥಿತಿ ಹೊಂದಿಲ್ಲ. ಚಾಣಾಕ್ಷ ರಾಜಕಾರಣಿಯಾಗಿರುವ ಆಜಾದ್ ಅವರು ಬ್ರೆಡ್‌ನ ಎರಡೂ ಬದಿಯಲ್ಲೂ ಬೆಣ್ಣೆ ಸಿಗಬೇಕು ಎಂದು ಬಯಸುತ್ತಾರೆ’ ಎಂದು ಅವರು ಹೇಳಿದರು.
ಆಜಾದ್ ಅವರನ್ನು ಸಮರ್ಥಿಸುವ ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ನಾಯಕರೊಬ್ಬರು ಪ್ರತಿಕ್ರಿಯಿಸಿ, ‘ ‘ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರಂತೆ ಪ್ರಶಸ್ತಿಯನ್ನು ಹಿಂದಿರುಗಿಸಬೇಕಿತ್ತು ಎನ್ನುವವರು ಮೊದಲು ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ನಾವು ವಿಭಿನ್ನ ಪರಿಸ್ಥಿತಿಯಲ್ಲಿ ಇದ್ದೇವೆ. ಈ ಪ್ರದೇಶದ ಅವ್ಯವಸ್ಥೆಯಿಂದ ಜನರನ್ನು ಹೊರತರುವ ಭರವಸೆಯ ನಾಯಕರಾಗಿದ್ದಾರೆ ಆಜಾದ್’ ಎಂದು ಬಣ್ಣಿಸಿದರು.
‘ಒಂದು ವೇಳೆ ಆಜಾದ್ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದರೆ, ಅದು ಕೇಂದ್ರದೊಂದಿಗಿನ ನೇರ ಮುಖಾಮುಖಿಯಾಗುತ್ತಿತ್ತು. ಅದು ಜಮ್ಮು ಮತ್ತು ಕಾಶ್ಮೀರದ ಹಿತದೃಷ್ಟಿಯಿಂದ ಸರಿ ಬರುತ್ತಿರಲಿಲ್ಲ’ ಎಂದು ಅವರು ಹೇಳಿದರು.
‘ನಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರನ್ನು ಗೌರವಿಸಿದರೆ ಅದನ್ನು ಟೀಕಿಸುವ ಬದಲು ಮೆಚ್ಚುಗೆಯಿಂದ ಸ್ವಾಗತಿಸಬೇಕು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಮನೆತನದ ಕರಣ್ ಸಿಂಗ್ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಈಚೆಗೆ ನಡೆದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಜಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದೆ. 2020ರಲ್ಲಿ ಪಕ್ಷದ ಆಂತರಿಕ ಸುಧಾರಣೆಗಳನ್ನು ಕೋರಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಜಿ–23 ಗುಂಪಿನ ನಾಯಕರಲ್ಲಿ ಆಜಾದ್ ಕೂಡ ಒಬ್ಬರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.