ತಿರುವನಂತಪುರ: ‘ಕಳೆದೊಂದು ವರ್ಷದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಅವರಿರುವ ಮನೆ ಹಾಗೂ ಅಕ್ಕಪಕ್ಕದವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ’ ಎಂದು ಕೇರಳದ ಮಕ್ಕಳ ಹಕ್ಕುಗಳ ಸಮಿತಿಯ ವರದಿ ಹೇಳಿದೆ.
2022–23ನೇ ಸಾಲಿನ ವರದಿ ಸಲ್ಲಿಸಿರುವ ಸಮಿತಿಯು, 4,586 ಮಕ್ಕಳು ಕಳೆದ ಒಂದು ವರ್ಷದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಒಂದು 1,004 ಮಕ್ಕಳು ತಮ್ಮ ಮನೆಯಲ್ಲೇ ಇಂಥ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 722 ಪ್ರಕರಣಗಳಲ್ಲಿ ಅಪರಾಧ ನಡೆದ ಸ್ಥಳದ ಸುತ್ತಮುತ್ತ ಈ ಮಕ್ಕಳ ಮನೆಗಳಿವೆ. 648 ಪ್ರಕರಣಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಿವೆ. ಈ ಪ್ರಕರಣಗಳನ್ನು ವಿಶ್ಲೇಷಿಸಿ 4,582 ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಕ್ಕಳು ಶಾಲಾ ವಾತಾವರಣದಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಳು (133) ದಾಖಲಾಗಿವೆ. ವಾಹನಗಳಲ್ಲಿ 102, ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ 99, ಧಾರ್ಮಿಕ ಸಂಸ್ಥೆಗಳಲ್ಲಿ 60, ಆಸ್ಪತ್ರೆಗಳಲ್ಲಿ 29 ಹೀಗೆ ಪಟ್ಟಿ ಮುಂದುವರಿಯುತ್ತಲೇ ಸಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಒಂದು ಘಟನೆಯಲ್ಲಿ ಕನಿಷ್ಠ ಒಬ್ಬರನ್ನು ರಕ್ಷಿಸಲಾಗಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಪೋಕ್ಸೊ ಕಾನೂನು ಕುರಿತು ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ತಿರುವನಂತಪುರದಲ್ಲೇ (583) ಹೆಚ್ಚು ದಾಖಲಾಗಿವೆ. ಕನಿಷ್ಠ ಪ್ರಕರಣಗಳು ಪತ್ತನಂಮಿಟ್ಟ (189) ಜಿಲ್ಲೆಯಲ್ಲಿ ದಾಖಲಾಗಿವೆ. ಒಟ್ಟು ಪ್ರಕರಣದಲ್ಲಿ 4,008 ಬಾಲಕಿಯರು ಹಾಗೂ 578 ಬಾಲಕರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಬಾಲಕಿಯರೇ ಹೆಚ್ಚು ಬಲಿಯಾಗುತ್ತಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ರಕ್ಷಣೆಗೊಂಡವರಲ್ಲಿ ಬಹುತೇಕರು 15ರಿಂದ 18ರ ವಯೋಮಾನದವರು (2563 ಮಕ್ಕಳು) ಆಗಿದ್ಧಾರೆ. ದೌರ್ಜನ್ಯ ಎಸಗುವವರಲ್ಲಿ ಶೇ 16ರಷ್ಟು ಪ್ರೇಮಿಗಳು, ಶೇ 12ರಷ್ಟು ಅಕ್ಕಪಕ್ಕದವರು, ಶೇ 9ರಷ್ಟು ಕುಟುಂಬದ ಸದಸ್ಯರು, ಶೇ 8ರಷ್ಟು ಸಂಬಂಧಿಕರು, ಶೇ 3ರಷ್ಟು ಶಿಕ್ಷಕರು ಆಗಿದ್ದಾರೆ. 55 ಮಕ್ಕಳು ನಾಲ್ಕು ವರ್ಷದೊಳಗಿನವರು. ಹೀಗೆ ದೌರ್ಜನ್ಯ ಎಸಗಿ ಪ್ರಕರಣ ದಾಖಲಾದವರಲ್ಲಿ ಶೇ 93ರಷ್ಟು ಆರೋಪಿಗಳು ಪುರುಷರೇ ಆಗಿದ್ದಾರೆ. ಮಹಿಳೆಯರ ಪ್ರಮಾಣ ಶೇ 2ರಷ್ಟಿದೆ’ ಎಂದು ವರದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.