ಚಂಡೀಗಡ: ಕಳೆದ ಎರಡು ತಿಂಗಳುಗಳಲ್ಲಿ ಪಂಜಾಬ್‌ನ ಅಟಾರಿ- ವಾಘಾ ಗಡಿ ದಾಟಿ ಹಲವಾರು ಹಿಂದೂಗಳು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಹೀಗೆ ಬಂದವರಲ್ಲಿ ಹಲವರ ವೀಸಾ ಅವಧಿ ಮುಗಿದಿದ್ದರೂ ಅವರು ಯಾರೂ ವಾಪಸ್ ಹೋಗಿಲ್ಲ.
ಜನವರಿ ತಿಂಗಳಲ್ಲಿ ಭಾರತಕ್ಕೆ ಬಂದಿರುವ 1,200 ಪಾಕ್ ಹಿಂದೂಗಳ ಪೈಕಿ ಸರಿಸುಮಾರು 900ರಷ್ಟು ಹಿಂದೂಗಳು ಪಾಕ್‌ಗೆ ಮರಳಿಲ್ಲ.ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 850 ಮಂದಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಇದರಲ್ಲಿ 220 ಹಿಂದೂಗಳ ವೀಸಾ ಅವಧಿ ಮುಗಿದಿದ್ದರೂ ಅವರು ವಾಪಸ್ ಹೋಗಿಲ್ಲ. ನವೆಂಬರ್ ತಿಂಗಳಲ್ಲಿಯೂ ಇದೇ ರೀತಿಯ ಬೆಳವಣಿಗೆ ನಡೆದಿತ್ತು.
ಪೌರತ್ವತಿದ್ದುಪಡಿ ಕಾಯ್ದೆ ಮೂಲಕ ಭಾರತದಲ್ಲಿ ಪೌರತ್ವ ಸಿಗಬಹುದು ಎಂಬ ಉದ್ದೇಶದಿಂದ ಈ ಹಿಂದೂಗಳು ಭಾರತಕ್ಕೆ ಬಂದಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಇಲ್ಲಿಯವರಿಗೆ 2500ರಷ್ಟು ಪಾಕಿಸ್ತಾನಿ ಹಿಂದೂಗಳು ಗಡಿ ದಾಟಿ ಬಂದು ಭಾರತದಲ್ಲಿ ನೆಲೆಸಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ 48 ಪಾಕ್ ಹಿಂದೂಗಳು ಗಡಿದಾಟಿ ಪಂಜಾಬ್‌ಗೆ ಬಂದಿದ್ದಾರೆ. ಈ ಗುಂಪಿನಲ್ಲಿದ್ದ 22ರ ಹರೆಯ ಲಾಲಿ ಎಂಬ ಪಾಕ್ ಹಿಂದೂ ಯುವತಿ ತಾನು ಭಾರತದಲ್ಲಿ ನೆಲೆಸುವ ಆಗ್ರಹ ವ್ಯಕ್ತ ಪಡಿಸಿದ್ದಾರೆ.
ಸಿಎಎ ಜಾರಿಯಾದರೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ವಲಸೆ ಬರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದ ಜನರಿಗೆ ಭಾರತ ಪೌರತ್ವ ನೀಡಲಿದೆ. ಆದಾಗ್ಯೂ, ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸಿಎಎಗೆ ವಿರೋಧ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.