ಭುಬನೇಶ್ವರ್: ಒಡಿಶಾಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಲಿದ್ದು, ಪ್ರಧಾನಿಗಾಗಿ ಹೆಲಿಪ್ಯಾಡ್ ನಿರ್ಮಿಸಲು1000 ಮರಗಳನ್ನು ಕತ್ತರಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಬಲಂಗೀರ್ ಎಂಬಲ್ಲಿ ಪ್ರಧಾನಿಯವರಿಗಾಗಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.ಇದಕ್ಕಾಗಿ ಸಾವಿರ ಮರಗಳನ್ನು ಕಡಿದು ತೆರವು ಮಾಡಲಾಗಿದೆ.
ಮಂಗಳವಾರ ಇಲ್ಲಿಗೆ ಆಗಮಿಸಲಿರುವ ಮೋದಿ ಬಲಂಗೀರ್ ರೈಲ್ವೆ ನಿಲ್ದಾಣದಲ್ಲಿ ಖುದ್ರಾ- ಬಲಂಗೀರ್ ರೈಲ್ವೆ ದಾರಿಯಾಗಿ ಸಾಗುವ ಹೊಸ ರೈಲು ಸಂಚಾರದ ಉದ್ಘಾಟನೆ ಮಾಡಲಿದ್ದಾರೆ.
ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಮರಗಳನ್ನು ಕಡಿದಿದ್ದಾರೆ ಎಂದು ಬಲಂಗೀರ್ ವಿಭಾಗೀಯ ಅರಣ್ಯ ಅಧಿಕಾರಿ ಸಮೀರ್ ಸತ್ಪತಿ ಅವರು ದೂರಿದ್ದಾರೆ.ಮರಗಳನ್ನು ಕಡಿಯುವುದಕ್ಕೆ ನಮ್ಮ ಸಿಬ್ಬಂದಿ ತಡೆಯೊಡ್ಡಿದಾಗಅಲ್ಲಿನ ಸೈಟ್ ಇನ್‍ಚಾರ್ಜ್ ಅವರು, ಹೆಲಿಪ್ಯಾಡ್‍ಗಾಗಿ ಜಾಗ ನಿರ್ಮಿಸಬೇಕೆಂದು ಉನ್ನತ ಅಧಿಕಾರಿಗಳಿಂದ ಆದೇಶ ಬಂದಿದೆ ಎಂದು ಸತ್ಪತಿ ಹೇಳಿರುವುದಾಗಿ ಒಡಿಶಾ ಟಿವಿಯೊಂದು ಉಲ್ಲೇಖಿಸಿದೆ. ಇಲ್ಲಿ ಕಡಿದು ತೆರವುಗೊಳಿಸಿರುವ ಮರಗಳ ಒಟ್ಟು ಮೌಲ್ಯ ₹2.5 ಲಕ್ಷ ಆಗಿದೆ.
ಈ ಜಮೀನಿನಹಕ್ಕುಮಾತ್ರ ಈಸ್ಟ್ ಕೋಸ್ಟ್ ರೈಲ್ವೆಗೆ ಇದೆ.ಇಲ್ಲಿ ಕೆಲಸ ಮಾಡಿದ್ದು ಲೋಕೋಪಯೋಗಿ ಇಲಾಖೆ ಎಂದು ಈಸ್ಟ್ ಕೋಸ್ಟ್ ರೈಲ್ವೆ ಇಲಾಖೆ ವಕ್ತಾರರು ಹೇಳಿದ್ದಾರೆ. ಆದಾಗ್ಯೂ, ಮರಗಳನ್ನು ಕತ್ತರಿಸಿದ್ದು ಯಾರು ಎಂಬುದರ ಬಗ್ಗೆ ಲೋಕೋಪಯೋಗಿ ಇಲಾಖೆಯವರಿಗೆ ಯಾವುದೇ ಮಾಹಿತಿ ಇಲ್ಲ!
2.25 ಹೆಕ್ಟೇರ್ವ್ಯಾಪ್ತಿಯಲ್ಲಿರುವ ರೈಲ್ವೆ ಜಮೀನಿನಲ್ಲಿ1.5 ಹೆಕ್ಟೇರ್ ನಲ್ಲಿದ್ದ ಮರಗಳನ್ನು ಕಡಿದು ತೆಗೆಯಲಾಗಿದೆ.ಪ್ರಧಾನಿಯವರ ಹೆಲಿಕಾಪ್ಟರ್ ಇಳಿಯಲು ಬೇರೆ ಜಾಗ ಇರಲಿಲ್ಲ ಎಂದು ಬಲಂಗೀರ್ ಪೊಲೀಸ್ ಅಧಿಕಾರಿ ಕೆ. ಶಿವ ಸುಬ್ರಮಣಿ ಹೇಳಿರುವುದಾಗಿ ದಿ ಹಿಂದು ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.