ನೀಲೇಶ್ವರ (ಕಾಸರಗೋಡು): ಪಟ್ಟಣದ ಅಂಞೂಟ್ಟಂಬಲಂ ವೀರರ್‌ಕಾವ್ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವೇಳೆ, ದಾಸ್ತಾನು ಇಟ್ಟಿದ್ದ ಪಟಾಕಿಗಳು ಸೋಮವಾರ ರಾತ್ರಿ 12.15ರ ಸುಮಾರಿಗೆ ಆಕಸ್ಮಿಕವಾಗಿ ಸ್ಫೋಟಿಸಿ ಸಂಬಂಧಿಸಿದ ಅಗ್ನಿದುರಂತದಲ್ಲಿ 154 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು, ಕಾಞಂಗಾಡ್‌ನ ವಿವಿಧ ಆಸ್ಪತ್ರೆ ಗಳಿಗೆ ಹಾಗೂ ಮಂಗಳೂರಿನ ಎ.ಜೆ ಆಸ್ಪತ್ರೆ, ಕೆ.ಎಸ್.ಹೆಗ್ಡೆ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ 21 ಮಂದಿ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರ ಸ್ಥಿತಿ ಚಿಂತಾಜನಕ ಆಗಿದೆ. 52 ಮಂದಿ ಚಿಕಿತ್ಸೆ ಪಡೆದು ಮಂಗಳವಾರ ಸಂಜೆ ಮನೆಗೆ ತೆರಳಿದ್ದಾರೆ.
ನೀಲೇಶ್ವರ–ಕಣ್ಣೂರು ಹೆದ್ದಾರಿ ಬದಿಯಲ್ಲಿರುವ ಈ ದೈವಸ್ಥಾನದಲ್ಲಿ ಮೂವಾಳಂಕುಳಿ ಚಾಮುಂಡಿಯ ವಾರ್ಷಿಕ ಕಳಿಯಾಟ್ಟಂ ಮಹೋತ್ಸವದ ಅಂಗವಾಗಿ ಮಂಗಳವಾರ ತೆಯ್ಯಂನಿಗದಿಯಾಗಿತ್ತು. ಈ ಪ್ರಯುಕ್ತ ಸೋ ಮವಾರ ತಡ ರಾತ್ರಿ ಕುಳಿಚ್ಚುತೋಟ್ಟಂ (ವೆಳ್ಳಾಟಂ) ನಡೆಯಬೇಕಿತ್ತು. ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ವೆಳ್ಳಾಟಂ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಪಟಾಕಿಯೊಂದನ್ನು ಸಿಡಿಸಲಾಗಿತ್ತು. ಅದರ ಕಿಡಿ ಹಾರಿ, ಮಾಲೆ ಪಟಾಕಿ ಮೇಲೆ ಬಿದ್ದಿದ್ದೇ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.
‘ಪಟಾಕಿ ಸಂಗ್ರಹಿಸಿದ್ದ ಶೆಡ್‌ನ ಮೇಲ್ಭಾಗ ತೆರೆದೇ ಇತ್ತು. ಅದರ ಮೂಲಕ ಪಟಾಕಿಯ ಕಿಡಿ ಹಾರಿ ಒಮ್ಮೆಲೇ ಧಗ್ ಎಂದು ಉರಿಯಿತು. ನಂತರ ಭಾರಿ ಸದ್ದಿನೊಂದಿಗೆ ಎಲ್ಲ ಪಟಾಕಿಗಳೂ ಸಿಡಿದವು. ಎಲ್ಲೆಡೆ ಹೊಗೆ ಆವರಿಸಿತು’ ಎಂದು ಅವರು ವಿವರಿಸಿದರು.
ಈ ದುರಂತದ ಬಳಿಕ ಕಳಿಯಾಟಂ ಅನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚು ಸಾಮರ್ಥ್ಯವಿಲ್ಲದ ಚೀನಾದ ಪಟಾಕಿಗಳನ್ನು ಮಾತ್ರ ಶೆಡ್‌ನಲ್ಲಿ ಇರಿಸಲಾಗಿತ್ತು. ಹೀಗಾಗಿ ದುರಂತದ ತೀವ್ರತೆ ಕಡಿಮೆಯಾಗಿತ್ತು ಎನ್ನಲಾಗಿದೆ. ಗಾಯಗೊಂಡವರಲ್ಲಿ ಹಸುಗೂಸು, ಮಕ್ಕಳು ಮತ್ತು ವೃದ್ಧರೂ ಇದ್ದರು.
‘ಪಟಾಕಿಯನ್ನು ಜನರು ಸೇರುವ ಜಾಗದ ಬಳಿಯಲ್ಲೇ ಸಂಗ್ರಹಿಸಿಟ್ಟಿದ್ದು ನಿಯಮಬಾಹಿರ. ಇದರಿಂದಾಗಿ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪ ತಿಳಿಸಿದ್ದಾರೆ.
‘ಹಿಂದಿನ ವರ್ಷಗಳಲ್ಲಿ ದೈವಸ್ಥಾನದ ಹಿಂಭಾಗದಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ಬಾರಿ ಜನರು ಸೇರಿದ್ದ ಜಾಗ
ದಲ್ಲೇ ಸಿಡಿಸಿದ್ದಾರೆ. ಪಟಾಕಿಗೆ ಬೆಂಕಿ ಹಚ್ಚುತ್ತಿದ್ದಂತೆ ಅನೇಕ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದೆ ಸಿಡಿಸಿದ್ದೇ ಘಟನೆಗೆ ಕಾರಣ’ ಎಂದು ಭಕ್ತರು ದೂರಿದ್ದಾರೆ.
ದೈವಸ್ಥಾನ ಆಡಳಿತ ಸಮಿತಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ
ಡಿ. ಇಂಬಶೇಖರನ್ ತಿಳಿಸಿದ್ದಾರೆ. ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆಗೆ ವಿಶೇಷ ತಂಡ: ವೀರರ್‌ಕಾವ್ ದೈವಸ್ಥಾನದಲ್ಲಿ ಸಂಭವಿಸಿದ ಪಟಾಕಿ ದುರಂತದ ತನಿಖೆಗೆ ಕಾಞಂಗಾಡ್ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಸಹಾಯಕ ಜಿಲ್ಲಾಧಿಕಾರಿ ತನಿಖೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ. ಇಂಬಶೇಖರನ್ ತಿಳಿಸಿದ್ದಾರೆ.
ಸಮಗ್ರ ತನಿಖೆ: ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ಸುಡುಮದ್ದು ಸಿಡಿಸುವಾಗ ನಿಂಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.