ಇಂಫಾಲ: ರೀಮಲ್ ಚಂಡಮಾರುತದಿಂದಾಗಿ ಮಣಿಪುರದಲ್ಲಿ ಸುರಿದ ಭಾರಿ ಮಳೆ ಪರಿಣಾಮ ಉಂಟಾದ ಪ್ರವಾಹದಿಂದ 1,88,143 ಜನರು ಬಾಧಿತರಾಗಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಕನಿಷ್ಠ 24,265 ಮನೆಗಳಿಗೆ ಹಾನಿಯಾಗಿದೆ ಎಂದು ಜಲ ಸಂಪನ್ಮೂಲ, ಪರಿಹಾರ ಮತ್ತು ವಿಪತ್ತು ನಿರ್ವಹಣಾ ಸಚಿವ ಅವಾಂಗ್‌ಬೊ ನ್ಯೂಮೈ ತಿಳಿಸಿದ್ದಾರೆ.
56 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 18,103 ಜನರನ್ನು ಸ್ಥಳಾಂತರಿಸಲಾಗಿದೆ. 401 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದು ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಫಾಲ್ ಪಶ್ಚಿಮ ಮತ್ತು ಪೂರ್ವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪರಿಹಾರ ಮತ್ತು ವಿಪತ್ತು ನಿರ್ವಹಣಾ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಕುರಿತು ಪರಿಶೀಲಿಸಲಾಯಿತು’ ಎಂದು ಅವರು ಹೇಳಿದ್ದಾರೆ.
‘ಮಳೆಯಿಂದಾಗಿ ಮೇ 29ರಂದು ರಾಜ್ಯದಲ್ಲಿ ಕಂಡುಬಂದ ಪ್ರವಾಹದಿಂದಾಗಿ ಮೂವರು ಮೃತಪಟ್ಟಿದ್ದಾರೆ. 9 ಜನರು ಗಾಯಗೊಂಡಿದ್ದರೆ, ಒಬ್ಬರು ನಾಪತ್ತೆಯಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
‘ರಾಜ್ಯದಲ್ಲಿ 18 ಸ್ಥಳಗಳಲ್ಲಿ ನದಿಗಳ ಒಡ್ಡುಗಳು ಒಡೆದಿದ್ದು, ಈ ಪೈಕಿ 17 ಸ್ಥಳಗಳಲ್ಲಿ ಮುಚ್ಚಲಾಗಿದೆ’ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
6 ನದಿಗಳಲ್ಲಿ ಪ್ರವಾಹ ಪರಿಸ್ಥಿತಿ: ಕೇಂದ್ರ ಜಲ ಆಯೋಗ
ನವದೆಹಲಿ(ಪಿಟಿಐ): ಅಸ್ಸಾಂನ ಬ್ರಹ್ಮಪುತ್ರ, ಮಣಿಪುರದ ಬರಾಕ್ ಸೇರಿದಂತೆ ಈಶಾನ್ಯ ರಾಜ್ಯಗಳ 6 ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಹಲವಾರು ಜಿಲ್ಲೆಗಳು ಅಪಾಯ ಎದುರಿಸುತ್ತಿವೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.
ಪ್ರವಾಹದಿಂದಾಗಿ ಅಸ್ಸಾಂನ 9 ಜಿಲ್ಲೆಗಳ ಎರಡು ಲಕ್ಷಕ್ಕೂ ಅಧಿಕ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೀಮಲ್ ಚಂಡಮಾರುತ ಹಾಗೂ ಇದರಿಂದಾಗಿ ಸುರಿದ ಮಳೆ ಪರಿಣಾಮ ಉಂಟಾದ ಪ್ರವಾಹದಿಂದ ಒಟ್ಟು 6 ಜನರು ಮೃತಪಟ್ಟಿದ್ದಾರೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಜೊರ್ಹಾಟ್ ಜಿಲ್ಲೆಯ ನಿಯಾಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿಯು 85.25 ಮೀಟರ್ ಎತ್ತರದಷ್ಟು ಹರಿಯುತ್ತಿದೆ. ಅಪಾಯ ಮಟ್ಟ 85.54 ಮೀ.ಗಿಂತ 0.28 ಮೀಟರ್‌ನಷ್ಟು ಅಧಿಕ. ಬರಾಕ್ ನದಿಯು ಸಹ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ ಎಂದು ತಿಳಿಸಿದ್ದಾರೆ.
ಅಸ್ಸಾಂನ ನಾಗಾವ್ ಜಿಲ್ಲೆಯಲ್ಲಿ ಕೊಪಿಲಿ ನದಿ, ಕರೀಂಗಂಜ್ ಜಿಲ್ಲೆಯಲ್ಲಿ ಕುಶಿಯಾರಾ ನದಿ, ಮತಿಜುರಿ ಜಿಲ್ಲೆಯಲ್ಲಿ ಕತಹಾಲ್ ನದಿ, ಧಳೇಶ್ವರಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ: ಮಾಹಿತಿ ಪಡೆದ ಸಚಿವ ಶಾ
ನವದೆಹಲಿ(ಪಿಟಿಐ): ಈಶಾನ್ಯ ರಾಜ್ಯಗಳಲ್ಲಿ ಸುರಿದ ಮಳೆ ಹಾಗೂ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಾಹಿತಿ ಪಡೆದ್ದಾರೆ.
ಐದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿರುವ ಅವರು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
‘ಅಸ್ಸಾಂ, ತ್ರಿಪುರಾ, ಮಣಿಪುರ, ಮೇಘಾಲಯ ಹಾಗೂ ಮಿಜೋರಾಂನಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.