ನವದೆಹಲಿ: ಮಕ್ಕಳಿಗಾಗಿ ಆರಂಭಿಸಿದ ಕೋವಿಡ್ ಲಸಿಕಾ ಅಭಿಯಾನದ ಒಂದು ವಾರದೊಳಗೆ 15-18 ವರ್ಷ ವಯಸ್ಸಿನ 2 ಕೋಟಿ ಮಕ್ಕಳು ತಮ್ಮ ಮೊದಲ ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಶನಿವಾರ ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆವರೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 90,59,360 ಮಂದಿಗೆ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ದೇಶದಲ್ಲಿ ಒಟ್ಟು 150.61 ಕೋಟಿಗೂ ಅಧಿಕ (150,61,92,903) ಮಂದಿಗೆ ಲಸಿಕೆ ನೀಡಲಾಗಿದೆ.
'ಒಳ್ಳೆಯ ಬೆಳವಣಿಗೆ ನನ್ನ ಯುವ ಸ್ನೇಹಿತರೇ. 15-18 ವರ್ಷದೊಳಗಿನ 2 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಆರಂಭಗೊಂಡ ಒಂದು ವಾರದೊಳಗೆ ಇದು ಸಾಧ್ಯವಾಗಿದೆ' ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದ ವಯಸ್ಕರ ಜನಸಂಖ್ಯೆಯ ಶೇ 91 ಕ್ಕಿಂತ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 66 ಕ್ಕಿಂತ ಹೆಚ್ಚು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.