ADVERTISEMENT

Bomb Threat | 30 ವಿಮಾನಗಳಿಗೆ ಬಾಂಬ್‌ ಬೆದರಿಕೆ

ಪಿಟಿಐ
Published 19 ಅಕ್ಟೋಬರ್ 2024, 9:47 IST
Last Updated 19 ಅಕ್ಟೋಬರ್ 2024, 9:47 IST
<div class="paragraphs"><p>ವಿಸ್ತಾರ ವಿಮಾನ</p></div>

ವಿಸ್ತಾರ ವಿಮಾನ

   

ರಾಯಿಟರ್ಸ್ ಚಿತ್ರ

ನವದೆಹಲಿ: ಶನಿವಾರ ಒಂದೇ ದಿನ ದೇಶದ ವಿವಿಧ ವಿಮಾನಯಾನ ಸಂಸ್ಥೆಗೆ ಸೇರಿದ ಸುಮಾರು 30 ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಹಲವು ವಿಮಾನಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ADVERTISEMENT

ಏರ್‌ ಇಂಡಿಯಾ, ಇಂಡಿಗೊ, ಆಕಾಶ ಏರ್‌, ವಿಸ್ತಾರ, ಸ್ಪೈಸ್‌ಜೆಟ್‌, ಸ್ಟಾರ್‌ ಏರ್‌ ಹಾಗೂ ಅಲಯನ್ಸ್‌ ಏರ್‌ ಸಂಸ್ಥೆಗಳಿಗೆ ಸೇರಿದ 30 ವಿಮಾನಗಳಿಗೆ ಶನಿವಾರ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಬೆಂಗಳೂರಿನಿಂದ ಮುಂಬೈಗೆ ಶನಿವಾರ ತೆರಳಬೇಕಿದ್ದ ಆಕಾಶ ಏರ್‌ ಸಂಸ್ಥೆಯ ವಿಮಾನವೂ ಸೇರಿದೆ.

ತುರ್ತು ಸಭೆ:  ಹುಸಿ ಬಾಂಬ್‌ ಬೆದರಿಕೆ ಬೆನ್ನಲ್ಲೇ, ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳ ಸಿಇಒಗಳ ಜತೆ ಶನಿವಾರ ಸಭೆ ನಡೆಸಿದ್ದು, ಸಾಮಾನ್ಯ ಕಾರ್ಯನಿರ್ವಹಣಾ ವಿಧಾನ ಅನುಸರಿಸುವಂತೆ ಸೂಚನೆ ನೀಡಿದೆ. ಸೋಮವಾ‌ರದಿಂದ ಒಟ್ಟು 70 ವಿಮಾನಗಳಿಗೆ ಹುಸಿ ಬಾಂಬ್‌ ಕರೆ ಮಾಡಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಸಚಿವಾಲಯವು ನಿರ್ಧರಿಸಿದೆ.

ಯಾವ ವಿಮಾನಗಳಿಗೆ ಬೆದರಿಕೆ?:

ಮುಂಬೈನಿಂದ ಇಸ್ತಾಂಬುಲ್‌ಗೆ ತೆರಳಬೇಕಿದ್ದ ಹಾಗೂ ದೆಹಲಿಯಿಂದ ಇಸ್ತಾಂಬುಲ್‌ಗೆ ಹೊರಟಿದ್ದ ಇಂಡಿಗೊ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಶನಿವಾರ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಜೋಧ್‌ಪುರದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನವನ್ನು ಮುನ್ನೆಚ್ಚರಿಕೆಗಳೊಂದಿಗೆ ದೆಹಲಿಯಲ್ಲಿ ಹಾ‌ಗೂ ಹೈದರಾಬಾದ್‌ನಿಂದ ಚಂಡೀಗಢಕ್ಕೆ ತೆರಳುತ್ತಿದ್ದ ವಿಮಾನವನ್ನು ಚಂಡೀಗಢದಲ್ಲಿ ಸುರಕ್ಷಿತ‌ವಾಗಿ ಇಳಿಸಲಾಗಿದೆ ಎಂದು ಇಂಡಿಗೊ ಪ್ರಕಟಣೆ ತಿಳಿಸಿದೆ.

ಸಿಂಗಪುರ– ಮುಂಬೈ, ದೆಹಲಿ– ಬ್ಯಾಂಕಾಕ್‌, ಮುಂಬೈ– ಫ್ರಾಂಕ್‌ಫರ್ಟ್‌, ಮುಂಬೈ– ಸಿಂಗಪುರ, ಮುಂಬೈ– ಕೊಲಂಬೊ ಹಾಗೂ ಉದಯಪುರ– ಮುಂಬೈ ನಡುವೆ ಸಂಚರಿಸುವ, ವಿಸ್ತಾರ ಸಂಸ್ಥೆಯ ವಿಮಾನಕ್ಕೂ ಬೆದರಿಕೆ ಹಾಕಲಾಗಿದೆ. ಈ ಪೈಕಿ ಉದಯಪುರದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವನ್ನು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಸಿ, ತಪಾಸಣೆ ನಡೆಸಲಾಗಿದೆ ಎಂದು ವಿಸ್ತಾರ ಸಂಸ್ಥೆ ತಿಳಿಸಿದೆ.

ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದಿತ್ತು. ಮುಂಬೈನಿಂದ ಸಿಲಿ‌ಗುರಿಗೆ ತೆರಳಬೇಕಿದ್ದ ಆಕಾಸ ಏರ್‌ ಸಂಸ್ಥೆಯ ವಿಮಾನಕ್ಕೂ ಬೆದರಿಕೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.