ನವದೆಹಲಿ: ಭಾರತದ ವಿಮಾನಯಾನ ಸಂಸ್ಥೆಗಳ 20ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಭಾನುವಾರ) ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಇಂಡಿಗೊ, ವಿಸ್ತಾರ, ಏರ್ ಇಂಡಿಯಾ ಮತ್ತು ಆಕಾಶ ಏರ್ ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ ಹಲವು ವಿಮಾನಗಳು ಬಾಂಬ್ ಬೆದರಿಕೆ ಸಂದೇಶ ಸ್ವೀಕರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಗೊ, ವಿಸ್ತಾರ ಮತ್ತು ಏರ್ ಇಂಡಿಯಾದ ತಲಾ ಆರು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ.
ಇಂಡಿಗೊ 6E58 ವಿಮಾನ (ಜೆಡ್ಡಾ–ಮುಂಬೈ), 6E87 (ಕೋಯಿಕೋಡ್– ದಮಾಮ್), 6E11 (ದೆಹಲಿ– ಇಸ್ತಾನ್‌ಬುಲ್), 6E17 (ಮುಂಬೈ– ಇಸ್ತಾನ್‌ಬುಲ್), 6E133 (ಪುಣೆಯಿಂದ – ಜೋಧಪುರ), ಮತ್ತು 6E112 (ಗೋವಾ–ಅಹಮದಾಬಾದ್) ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಇಂಡಿಗೊದ ವಕ್ತಾರರು ತಿಳಿಸಿದ್ದಾರೆ.
ವಿಸ್ತಾರದ UK25 (ದೆಹಲಿ–ಫ್ರಾಂಕ್‌ಫರ್ಟ್), UK106 (ಸಿಂಗಪುರ–ಮುಂಬೈ), UK146 (ಬಾಲಿ–ದೆಹಲಿ), UK116 (ಸಿಂಗಪುರ–ದೆಹಲಿ), UK110 (ಸಿಂಗಪುರ–ಪುಣೆ) ಮತ್ತು UK107 (ಮುಂಬೈ–ಸಿಂಗಪುರ) ಈ ಆರು ವಿಮಾನಗಳಿಗೆ ಬೆದರಿಕೆ ಬಂದಿದೆ ಎಂದು ವಿಸ್ತಾರ ಹೇಳಿದೆ.
ಶಿಷ್ಟಾಚಾರದ ಪ್ರಕಾರ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ಅವರು ತಪಾಸಣೆ ನಡೆಸಿದ್ದಾರೆ ಎಂದು ವಿಸ್ತಾರ ಪ್ರಕಟಣೆಯಲ್ಲಿ ತಿಳಿಸಿದೆ.
ಆಕಾಶ ಏರ್‌ನ ಕೆಲವು ವಿಮಾನಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ತುರ್ತು ಪ್ರತಿಕ್ರಿಯೆ ತಂಡಗಳು ಪರಿಶೀಲನೆ ನಡೆಸುತ್ತಿವೆ. ಭದ್ರತಾ ಮತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಆಕಾಶ ಏರ್ ಹೇಳಿದೆ.
ಏರ್ ಇಂಡಿಯಾದ ಕನಿಷ್ಠ ಆರು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದ್ದಾಗಿ ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಏರ್‌ಲೈನ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಈ ವಾರ ಇಲ್ಲಿಯವರೆಗೆ, 90ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಅವುಗಳಲ್ಲಿ ಹೆಚ್ಚಿನವು ಹುಸಿ ಬೆದರಿಕೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.